← Back to list

ಹನುಮಂತನೊಲಿದ ಪರಮ ಭಕ್ತ

ಮೋಹದ ಕತ್ತಲೆಯಿಂದ ಭಕ್ತಿಯ ಬೆಳಕಿಗೆ: ತುಳಸಿದಾಸರ ರೋಮಾಂಚಕ ಪಯಣ

ಆಕಡೆ ಒಂಚೂರ್ ಈಕಡೆ ಒಂಚೂರ್ · 2025-12-06 13:46 · 4 claps · 5.7 min read
#tulsidas #ramcharitmanas #devotional #sri-rama #hanuman
Open on Medium ↗

ಹನುಮಂತನೊಲಿದ ಪರಮ ಭಕ್ತ

ಒಂದು ಘೋರ ದುರಂತ… ಜಗತ್ತನ್ನೇ ಕಾಯುವ ಅದ್ಭುತ ಸ್ತೋತ್ರಕ್ಕೆ ಜನ್ಮ ನೀಡಿತು!

ಆಂಜನೇಯನ ಪರಮ ಭಕ್ತನ ಬದುಕಿನಲ್ಲಿ ಅಪ್ಪಳಿಸಿದ ಆ ಆಘಾತಕಾರಿ ಘಟನೆಗಳು ಯಾವುವು?

ಆ ನೋವಿನಿಂದಲೇ ಹುಟ್ಟಿ, ಇಂದಿಗೂ ಇಡೀ ಮನುಕುಲಕ್ಕೆ ಸಂಜೀವಿನಿಯಂತಿರುವ ಆ ಮಹಾನ್ ಸ್ತೋತ್ರಗಳು ಯಾವುವು? ಈ ಚರಿತ್ರೆಯನ್ನು ಕೇಳಿದರೆ ಸ್ವತಃ ಹನುಮಂತನಿಗೇ ರೋಮಾಂಚನವಾಗುತ್ತದೆ! ಆ ದಿವ್ಯ ಕಥೆಯನ್ನು ನಾನು ಈಗ ತಿಳಿಸುವೆ.

ಶಾಪಗ್ರಸ್ತ ಜನನ

ಅದು ಅಲಹಾಬಾದ್ ಬಳಿಯ ರಾಯಪುರ ಎಂಬ ಗ್ರಾಮ. ಅಲ್ಲಿ ಒಂದು ಮಗು ಜನಿಸಿತು. ಆದರೆ ಆ ಹುಟ್ಟೇ ಒಂದು ಶಾಪವಾಗಿತ್ತು! ಯಾಕೆಂದರೆ, ಆ ಮಗು ಹುಟ್ಟಿದ್ದು ‘ಅಭುಕ್ತ ಮೂಲ’ ಎಂಬ ಅತ್ಯಂತ ಗಂಡಾಂತರಕಾರೀ ನಕ್ಷತ್ರದಲ್ಲಿ. ಜ್ಯೋತಿಷಿಗಳು ತಕ್ಷಣವೇ ಕರಾಳ ಭವಿಷ್ಯ ನುಡಿದರು “ಈ ಮಗುವಿನ ತಂದೆ-ತಾಯಿಗಳಿಗೆ ಗಂಡಾಂತರ!” ತಂದೆಯು ಭಯಭೀತನಾಗಿ ಮಗುವನ್ನು ಹೊರಗೆ ಬಿಟ್ಟು ಬರಲು ನಿರ್ಧರಿಸಿದ. ಆದರೆ ಆ ತಾಯಿ ಒಪ್ಪಲಿಲ್ಲ. “ಏನು ಹೇಳುತ್ತಿದ್ದೀರಿ? ನನ್ನ ಕರುಳಬಳ್ಳಿಯನ್ನು ಹೇಗೆ ಬಿಡಲಿ? ಅದು ಅಸಾಧ್ಯ. ನಾನು ಸತ್ತರೂ ಸರಿಯೇ, ಮಗುವನ್ನು ತ್ಯಜಿಸುವುದಿಲ್ಲ,” ಎಂದು ಬಿಟ್ಟಳು.

ಪಾಪ, ಆ ತಾಯಿ ಮಗುವನ್ನು ಉಳಿಸಿಕೊಂಡಳು. ಆದರೆ, ಜ್ಯೋತಿಷಿಗಳ ಮಾತು ಸುಳ್ಳಾಗಲಿಲ್ಲ. ವಿಧಿಯ ಆಟ, ಆ ತಾಯಿ ಮಗುವಿನ ಮುಖ ನೋಡಿ ಹೆಚ್ಚು ದಿನ ಬದುಕಲಿಲ್ಲ, ಆಕೆ ತೀರಿಕೊಂಡಳು! ಈಗ ತಂದೆಗೆ ಮಗುವಿನ ಮೇಲಿದ್ದ ಭಯ ಇಮ್ಮಡಿಯಾಯಿತು. ಆತ ಮಗುವನ್ನು ತೆಗೆದುಕೊಂಡು ಹೋಗಿ ತನ್ನ ತಂಗಿಯ ಮನೆಯಲ್ಲಿ ಬಿಟ್ಟುಬಂದ. ಆ ಚಿಕ್ಕಮ್ಮನೇ ಮಗುವನ್ನು ಆರೇಳು ವರ್ಷಗಳ ಕಾಲ ಪ್ರೀತಿಯಿಂದ ಸಾಕಿದಳು. ಆದರೆ ಆ ಬಾಲಕನ ದುರಾದೃಷ್ಟ ಇನ್ನೂ ಮುಗಿದಿರಲಿಲ್ಲ. ಆರೇಳು ವರ್ಷ ತುಂಬುವಷ್ಟರಲ್ಲಿ, ಆತನನ್ನು ಸಾಕಿದ ಆಕೆಯೂ ತೀರಿಕೊಂಡಳು! ಸಾಯುವಾಗ ಆಕೆ ಆ ಬಾಲಕನ ಕೈ ಹಿಡಿದು ಹೇಳಿದಳು, “ಮಗು, ಇನ್ನು ನಿನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ಅಲ್ಲಿ ಕಾಣುತ್ತಿದೆಯಲ್ಲಾ ಆಂಜನೇಯ ಸ್ವಾಮಿಯ ಗುಡಿ, ಆತನೇ ಇನ್ನು ನಿನ್ನನ್ನು ನೋಡಿಕೊಳ್ಳಬೇಕು.” ಎಂದು ಹೇಳಿ, ಆ ಗುಡಿಯ ಬಳಿ ಬಿಟ್ಟು ಆಕೆಯೂ ಪ್ರಾಣಬಿಟ್ಟಳು.

ತಂದೆ-ತಾಯಿ, ಸಾಕಿದವರೂ ಇಲ್ಲದ ಆ ಬಾಲಕ, ಆ ಗುಡಿಯ ಜಗುಲಿಯ ಮೇಲೆಯೇ ಮಲಗಲು ಆರಂಭಿಸಿದ. ಅವನಿಗೆ ಬೇರೆ ದಿಕ್ಕೇ ಇರಲಿಲ್ಲ. ಪ್ರತಿದಿನವೂ ಭಕ್ತರು ಆ ಗುಡಿಗೆ ಬಂದು ರಾಮಭಜನೆ ಮಾಡುವುದನ್ನು ಆ ಬಾಲಕ ಕುಳಿತು ಕೇಳುತ್ತಿದ್ದ. ಕೇಳಿ ಕೇಳಿ, ಆತನ ಮನಸ್ಸು ಸಂಪೂರ್ಣವಾಗಿ ರಾಮನಾಮಕ್ಕೆ ಅಂಟಿಕೊಂಡಿತು. ಸದಾ “ರಾಮ, ರಾಮ, ರಾಮ” ಎಂದು ಜಪಿಸುತ್ತಲೇ ಇರುತ್ತಿದ್ದ. ಅದನ್ನು ನೋಡಿ, ಊರಿನವರೆಲ್ಲಾ ಆತನನ್ನು ‘ರಾಮ್ ಬೋಲಾ’ (ರಾಮನನ್ನೇ ಹೇಳುವವನು) ಎಂದು ಕರೆಯಲು ಪ್ರಾರಂಭಿಸಿದರು. ಇದೇ ಸಮಯದಲ್ಲಿ, ಆ ಕಾಲದ ಮಹಾನ್ ಉಪಾಸಕರಾದ ‘ರಾಮಾನಂದ ಮಹರ್ಷಿ’ಎಂಬ ಗುರುಗಳು ಒಂದು ದಿನ ಅವರ ಶಿಷ್ಯನೊಬ್ಬನ ಕನಸಿನಲ್ಲಿ ಬಂದು “ಹೋಗು, ಆ ಗುಡಿಯ ಜಗುಲಿಯ ಮೇಲೆ ರಾಮ್ ಬೋಲಾ ಎಂಬ ಹುಡುಗನಿದ್ದಾನೆ. ಅವನಿಗೆ ‘ರಾಮತಾರಕ ಮಂತ್ರ’ವನ್ನು ಉಪದೇಶಿಸು.” ಎಂದರು ಹಾಗೆ ಮಂತ್ರ ಪಡೆದ ಅವನು, ಜಪ ಮಾಡುತ್ತಾ ದೊಡ್ಡ ಉಪಾಸಕನಾದನು.

ಮೋಹದ ಅಂಧತ್ವ

ಒಮ್ಮೆ ಆ ಪ್ರದೇಶಕ್ಕೆ ತಂದೆ-ಮಗಳು ಪ್ರಯಾಣಿಸುತ್ತಿದ್ದರು. ಅವರು ಜಗುಲಿಯ ಮೇಲೆ ಕುಳಿತಿದ್ದ ರಾಮ್ ಬೋಲಾನನ್ನು ಕಂಡರು. ಉಪಾಸನೆಯಿಂದ ಅವನ ಮುಖದಲ್ಲಿ ಒಂದು ದೈವೀಕ ವರ್ಚಸ್ಸು ತುಂಬಿತ್ತು. ಅದನ್ನು ನೋಡಿ ಆ ತಂದೆಗೆ ಪರಮ ಸಂತೋಷವಾಯಿತು. “ಯಾರಪ್ಪಾ ನೀನು ಮಗು?” ಎಂದು ವಿಚಾರಿಸಿದರು. “ನನಗೆ ಯಾರೂ ಇಲ್ಲ, ನನ್ನನ್ನು ರಾಮ್ ಬೋಲಾ ಎನ್ನುತ್ತಾರೆ,” ಎಂದನು ಬಾಲಕ. ಆ ತಂದೆ ಹೇಳಿದರು, “ಬಹಳ ಸಂತೋಷ ಮಗು! ನಿನ್ನಂತಹ ತೇಜಸ್ವಿ, ನಿನ್ನಂತಹ ಉಪಾಸಕನನ್ನು ನೋಡಿ ನನಗೆ ಬಹಳ ಆನಂದವಾಯಿತು. ನನ್ನ ಮಗಳು ‘ರತ್ನಾವಳಿ’ಯನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇನೆ.” ಹೀಗೆ, ಅನಾಥನಾಗಿದ್ದ ರಾಮ್ ಬೋಲಾನಿಗೆ, ರತ್ನಾವಳಿಯು ಪತ್ನಿಯಾದಳು. ವಿವಾಹವು ಅವನ ಜೀವನದಲ್ಲಿ ಹೊಸ ಅಧ್ಯಾಯವನ್ನೇನೋ ತೆರೆಯಿತು, ಆದರೆ ಅದು ಅವನನ್ನು ಭಕ್ತಿಯ ಮಾರ್ಗದಿಂದ ವಿಮುಖನನ್ನಾಗಿಸುತ್ತಿತ್ತು. ಬಾಲ್ಯದಿಂದ ಪ್ರೀತಿಗಾಗಿಯೇ ಹಂಬಲಿಸಿದ್ದ ಅವನಿಗೆ, ಪತ್ನಿ ರತ್ನಾವಳಿಯ ಪ್ರೀತಿಯು ಸಾಗರದಂತೆ ಸಿಕ್ಕಿತು. ಅವನು ಆ ಪ್ರೀತಿಯಲ್ಲಿ ಸಂಪೂರ್ಣವಾಗಿ ಮುಳುಗಿಹೋದನು. ಆ ಪ್ರೀತಿಯು ತನ್ನ ‘ಮೋಹ’ವಾಗಿ ಮಾರ್ಪಟ್ಟಿತು. ಅವನ ಜಗತ್ತು ಪತ್ನಿಯ ಸುತ್ತಲೇ ಗಿರಕಿ ಹೊಡೆಯಲು ಶುರುವಾಯಿತು. ಫಲಿತಾಂಶ ರಾಮ ಜಪ ನಿಂತಿತು, ಪತ್ನಿಯ ಸೇವೆಯೇ ಜಪವಾಯಿತು! ಅವನ ಈ ಅತಿಯಾದ ಅಧೀರತೆಯನ್ನು, ಈ ಹುಚ್ಚು ಪ್ರೀತಿಯನ್ನು ಅವನ ಪತ್ನಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. “ಇದು ಪ್ರೀತಿಯ ಲಕ್ಷಣವಲ್ಲ, ಇದು ವಿಕಾರದ ಸೂಚನೆ” ಎಂದು ಅವಳ ಪ್ರಬುದ್ಧ ಮನಸ್ಸಿಗೆ ಸ್ಪಷ್ಟವಾಗಿತ್ತು.

ಒಂದು ದಿನ, ತಂದೆಯ ಅನಾರೋಗ್ಯದ ಕಾರಣ ರತ್ನಾವಳಿ ತವರಿಗೆ ಪ್ರಯಾಣ ಬೆಳೆಸಿದಳು. ಹೊರಡುವ ಮುನ್ನ, “ಸಂಜೆಯೊಳಗೆ ಮರಳಬೇಕು” ಎಂಬುದು ಪತಿಯಾದ ರಾಮ್ ಬೋಲಾನ ಕಟ್ಟಪ್ಪಣೆಯಾಗಿತ್ತು. ಆದರೆ, ಅವಳು ತವರುಮನೆ ತಲುಪಿದಾಗ ಪ್ರಕೃತಿಯೇ ಮುನಿಸಿಕೊಂಡಿತ್ತು. ಭಾರಿ ಬಿರುಗಾಳಿ ಮತ್ತು ನಿಲ್ಲದ ಮಳೆ! ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆಕೆ, “ರಾತ್ರಿ ಇಲ್ಲೇ ಇದ್ದು, ಬೆಳಿಗ್ಗೆ ಹೋಗುತ್ತೇನೆ” ಎಂದು ತನ್ನ ತಂದೆಗೆ ತಿಳಿಸಿ ಅಲ್ಲೇ ಉಳಿದುಕೊಂಡಳು. ಆದರೆ ಈ ಕಡೆ, ಪತ್ನಿಯ ವಿರಹವನ್ನು ಒಂದು ಕ್ಷಣವೂ ಸಹಿಸಲು ಅವನಿಗೆ ಸಾಧ್ಯವಾಗಲಿಲ್ಲ. ಅವಳ ಮೇಲಿನ ವಿಪರೀತ ಮೋಹವು ಕಣ್ಣನ್ನು ಸಂಪೂರ್ಣವಾಗಿ ಮರೆಮಾಡಿತ್ತು. ಪರಿಣಾಮವಾಗಿ, ಆ ಭೀಕರ ಮಧ್ಯರಾತ್ರಿಯ ಮಳೆಯನ್ನು ಲೆಕ್ಕಿಸದೆ, ಪತ್ನಿಯನ್ನರಸಿ ಮಾವನ ಮನೆಗೆ ಹೊರಟೇಬಿಟ್ಟನು!

ಅವನು ಅಲ್ಲಿಗೆ ತಲುಪುವಷ್ಟರಲ್ಲಿ ಮಧ್ಯರಾತ್ರಿ, ಸುತ್ತಲೂ ಕತ್ತಲು ಮತ್ತು ಭಾರಿ ಮಳೆ. ‘ಈಗ ಮನೆಯ ಬಾಗಿಲು ತಟ್ಟಿದರೆ, “ಹೆಂಡತಿಯನ್ನು ಬಿಟ್ಟು ಒಂದು ಹೊತ್ತೂ ಇರಲಾಗಲಿಲ್ಲವೇ?” ಎಂದು ಎಲ್ಲರೂ ಗೇಲಿ ಮಾಡುತ್ತಾರೆ’ ಎಂದು ಅವನು ಹಿಂಬದಿಯಿಂದ ಹೋದನು. ಅಲ್ಲಿ ಮಹಡಿಯಲ್ಲಿದ್ದ ಹೆಂಡತಿಯ ಕೋಣೆಯ ಬಳಿ ಒಂದು ಹಗ್ಗ ಜೋತುಬಿದ್ದಿರುವುದು ಕಂಡಿತು. ‘ಓಹೋ! ಪತ್ನಿ ನನಗಾಗಿ ಹಗ್ಗ ಹಾಕಿದ್ದಾಳೆ’ ಎಂದುಕೊಂಡು ಅದನ್ನೇ ಹಿಡಿದು ಮೇಲೆ ಹತ್ತಿದನು.

ಮೇಲೆ ಹತ್ತಿ ಬಾಗಿಲು ತಟ್ಟಿದಾಗ, ಆಕೆ ಬಾಗಿಲು ತೆರೆದು, “ಇದೇನಿದು, ಈ ಸಮಯದಲ್ಲಿ ಹೀಗೆ ಬಂದಿದ್ದೀರಿ?” ಎಂದು ಗಾಬರಿಯಿಂದ ಕೇಳಿದಳು. ಅದಕ್ಕೆ ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು, “ರತ್ನಾವಳಿ, ನಿನ್ನನ್ನು ಬಿಟ್ಟು ನಾನಿರಲಾರೆ. ಅದಕ್ಕೇ ಬಂದೆ, ನಿನ್ನ ಮೇಲೆ ನನಗೆ ಹುಚ್ಚು ಪ್ರೀತಿ!” ಎಂದನು. ಅವನಿಗೆ ಅದು ಪ್ರೀತಿ ಎನಿಸಿತ್ತು, ಆದರೆ ಆಕೆಗೆ ಅದರಲ್ಲಿ ಕೇವಲ ಮೋಹ ಕಾಣಿಸಿತು. ಆಕೆ, “ಹೇಗೆ ಬಂದಿರಿ?” ಎಂದು ಕೇಳಿದಳು. ಅದಕ್ಕೆ ಅವನು, “ನೀನು ನನಗಾಗಿ ಕೆಳಗೆ ಹಗ್ಗ ಹಾಕಿದ್ದೆಯಲ್ಲ, ಅದನ್ನು ಹಿಡಿದು ಬಂದೆ” ಎಂದನು. ಅನುಮಾನಗೊಂಡ ರತ್ನಾವಳಿ ದೀಪವನ್ನು ತಂದು ಕೆಳಗೆ ನೋಡಿದಾಗ ಇಬ್ಬರಿಗೂ ಆಘಾತ ಕಾದಿತ್ತು! ಅದು ಹಗ್ಗವಾಗಿರಲಿಲ್ಲ, ಅದೊಂದು ಸತ್ತು ಜೋತುಬಿದ್ದಿದ್ದ ಹೆಬ್ಬಾವು!

“ಏನಿದು? ಆ ಮೋಹದಲ್ಲಿ, ಆ ಕಾಮಾತುರತೆಯಲ್ಲಿ ನಿಮಗೆ ಹಗ್ಗಕ್ಕೂ ಹಾವಿಗೂ ವ್ಯತ್ಯಾಸ ತಿಳಿಯಲಿಲ್ಲವೇ? ಅದನ್ನು ಹಿಡಿದು ಮೇಲೆ ಬಂದಿದ್ದೀರಾ, ಎಂತಹ ಘೋರ ಇದು! ಕೇವಲ ಈ ದೇಹಕ್ಕಾಗಿ ಹೀಗೆ ಹುಚ್ಚು ಹಿಡಿದಿದ್ದೀರಲ್ಲ! ಇದರಲ್ಲಿ ಮಾಂಸ, ಮೂಳೆಗಳಲ್ಲದೆ ಬೇರೇನಿದೆ? ನಾಳೆ ನಾನು ಮುದುಕಿಯಾದರೆ, ಆಗಲೂ ನಿಮ್ಮ ಹುಚ್ಚು ಈ ದೇಹದ ಮೇಲೆ ಹೀಗೆಯೇ ಇರುತ್ತದೆಯೇ?” “ನೋಡಿ, ಈಗ ನನ್ನ ಮೇಲೆ ತೋರಿಸುತ್ತಿರುವ ಈ ಹುಚ್ಚು ಪ್ರೀತಿ, ಇದರಲ್ಲಿ ಅರ್ಧದಷ್ಟನ್ನಾದರೂ ನೀವು ಶ್ರೀರಾಮನ ಮೇಲೆ ತೋರಿಸಿದ್ದರೆ, ಇಷ್ಟೊತ್ತಿಗೆ ನಿಮಗೆ ರಾಮ ಸಾಕ್ಷಾತ್ಕಾರವಾಗುತ್ತಿತ್ತು. ನನಗಾಗಿ ತಪಸ್ಸು ಮಾಡುವುದನ್ನು ಬಿಟ್ಟು, ಆ ಶ್ರೀರಾಮನಿಗಾಗಿ ತಪಸ್ಸು ಮಾಡಿ!” ಪತ್ನಿಯ ಆ ಮಾತುಗಳು ಅವನ ಕಣ್ಣು ತೆರೆಸಿದವು.

‘ರಾಮ್ ಬೋಲಾ’ನಿಂದ ತುಳಸಿದಾಸನಿಗೆ

ಶಿಲ್ಪಿ ಕಲ್ಲನು ಕೊರೆದು, ಉಳಿಯ ಪೆಟ್ಟನು ಬಡಿದು | ಅಲ್ಪ ದೋಷವ ಕಳೆದು, ವಿಗ್ರಹವ ಮಾಡುವನು || ಅಲ್ಪ ಮಾನವನಿಂದ ಪಕ್ವಜೀವವ ಮಾಡೆ| ಶಿಲ್ಪಿಯೇ ವಿಧಿರಾಯ — ಮಂಕುತಿಮ್ಮ ||

ಪತ್ನಿಯ ಜ್ಞಾನದ ಚಾಟಿಯಿಂದ ಎಚ್ಚೆತ್ತ ಅವನು, ಸಂಸಾರ ತ್ಯಜಿಸಿ ಕಾಶಿಯಾತ್ರೆ ಬೆಳೆಸಿದರು. ಪವಿತ್ರ ವಾರಣಾಸಿಯ ತುಳಸಿ ಘಾಟ್‌ನಲ್ಲಿ ನೆಲೆಸಿ, ಅವರು ಅಚಲ ತಪಸ್ಸಿಗೆ ಕುಳಿತರು. ಅವರ ಬಾಯಿಂದ ಹೊರಬರುತ್ತಿದ್ದ ಪ್ರತಿ ಮಾತೂ ರಾಮ-ಹನುಮರ ಕೃಪೆಯಿಂದ ಮಹಾಮಂತ್ರದ ಸ್ತೋತ್ರವಾಗಿ ಮಾರ್ಪಡುತ್ತಿತ್ತು. ಅವರ ಜೀವನವನ್ನು ಬದಲಿಸಿದ, ಮತ್ತು ಲೋಕಕ್ಕೆ ಮಹಾನ್ ಸ್ತೋತ್ರಗಳನ್ನು ನೀಡಿದ ಆ ಮೂರು ಘಟನೆಗಳು ಇಲ್ಲಿವೆ.

ತುಳಸಿದಾಸರು ವಾರಣಾಸಿಯಲ್ಲಿ ತಪಃಶಕ್ತಿಯಿಂದ ಪ್ರಜ್ವಲಿಸುತ್ತಿದ್ದರು. ಅವರ ದರ್ಶನಕ್ಕೆ ಜನಸಾಗರವೇ ಹರಿಯುತ್ತಿತ್ತು. ಆದರೆ, ಅದೇ ಊರಲ್ಲಿ ಭೈರವನಾಥ ಎಂಬ ಕ್ಷುದ್ರ ತಾಂತ್ರಿಕನಿದ್ದ. ತನ್ನನ್ನು ದೇವರು ಎಂದು ಕರೆಸಿಕೊಳ್ಳುತ್ತಿದ್ದ ಅವನಿಗೆ, ತುಳಸಿದಾಸರ ಖ್ಯಾತಿ ಕಂಡರೆ ಉರಿ. “ವಾರಣಾಸಿಗೆ ಬಂದವರು ನನಗೆ ನಮಸ್ಕರಿಸಲೇಬೇಕು” ಎಂಬ ಅವನ ದುರಹಂಕಾರದ ನಿಯಮವನ್ನು ತುಳಸಿದಾಸರು ಪಾಲಿಸಿರಲಿಲ್ಲ.

ಇದು ಅವನ ಅಸೂಯೆಯನ್ನು ದ್ವೇಷವಾಗಿ ಪರಿವರ್ತಿಸಿತು. ಒಂದು ದಿನ, ತುಳಸಿದಾಸರು ಹಸಿದು ಬಂದ ಅಸ್ಪೃಶ್ಯ ವ್ಯಕ್ತಿಗೆ ಊಟ ನೀಡಿ, ಆಶ್ರಯ ಕೊಟ್ಟಿದ್ದನ್ನೇ ನೆಪವಾಗಿಸಿಕೊಂಡನು. ಮರುದಿನ, ತುಳಸಿದಾಸರು ವಿಶ್ವನಾಥನ ದರ್ಶನಕ್ಕೆ ಹೊರಟಾಗ, ಭೈರವನಾಥನು ಜನರನ್ನು ಸೇರಿಸಿ ಅಡ್ಡಗಟ್ಟಿದ. “ಅಸ್ಪೃಶ್ಯನಿಗೆ ಅನ್ನವಿಟ್ಟ ನೀನೂ ಅಪವಿತ್ರ! ನಿನಗೆ ದೇವಾಲಯ ಪ್ರವೇಶಿಸಲು ಅರ್ಹತೆಯಿಲ್ಲ!” ಎಂದು ಅಬ್ಬರಿಸಿದ.

ತುಳಸಿದಾಸರು ಶಾಂತವಾಗಿ ನಕ್ಕು, “ಅಸ್ಪೃಶ್ಯತೆ ಎಂದರೇನು? ಹಸಿವಿಗೆ ಕುಲವೇನು? ಎಲ್ಲರೂ ಆ ಭಗವಂತನ ಸೃಷ್ಟಿಯೇ. ನಿನ್ನಲ್ಲಿ, ನನ್ನಲ್ಲಿ, ಕೊನೆಗೆ… ಆ ಕಲ್ಲಿನ ನಂದಿಯಲ್ಲಿ ಇರುವುದೂ ಒಬ್ಬನೇ ದೇವರು!” ಎಂದರು. ಅವಕಾಶಕ್ಕಾಗಿ ಕಾದಿದ್ದ ಭೈರವನಾಥ, “ಹೌದೇ? ಈ ಕಲ್ಲಿನ ನಂದಿಯಲ್ಲೂ ದೇವರಿದ್ದಾನೆಯೇ? ಹಾಗಿದ್ದರೆ ಈ ಹುಲ್ಲನ್ನು ಅದಕ್ಕೆ ತಿನ್ನಿಸು ನೋಡೋಣ!” ಎಂದು ಅಟ್ಟಹಾಸಗೈದನು.

ಮಹಾತ್ಮರಾದ ತುಳಸಿದಾಸರು ಒಂದು ಕ್ಷಣವೂ ತಡಮಾಡಲಿಲ್ಲ. “ನಂದೀಶ್ವರ! ಹಸಿವಾಗಿದ್ದರೆ ಈ ಹುಲ್ಲನ್ನು ಸ್ವೀಕರಿಸು” ಎಂದರು. ಅಲ್ಲಿ ನೆರೆದಿದ್ದ ನೂರಾರು ಜನರ ಕಣ್ಣೆದುರೇ, ಆ ಕಲ್ಲಿನ ನಂದಿಯು ಜೀವಂತವಾಗಿ ಬಾಯಿ ತೆರೆದು ಆ ಹುಲ್ಲನ್ನು ಸೇವಿಸಿತು! ಈ ಅದ್ಭುತ ಪವಾಡವನ್ನು ಕಂಡು ಜನರೆಲ್ಲರೂ ತುಳಸಿದಾಸರ ಪಾದಗಳಿಗೆರಗಿದರು. ಭೈರವನಾಥನು ಅವಮಾನದಿಂದ ಕುದಿದುಹೋದನು.

ನೇರ ಪವಾಡದಲ್ಲಿ ಸೋತ ಭೈರವನಾಥನು, ಹೇಡಿತನದ ಹಾದಿ ಹಿಡಿದ. ತನ್ನ ತಾಂತ್ರಿಕ ಶಕ್ತಿಯಿಂದ ತುಳಸಿದಾಸರ ಮೇಲೆ ಘೋರವಾದ ‘ಭುಜ ಸ್ತಂಭನ’ {ಕೈ-ಕಾಲು ಬೀಳುವಂತೆ ಮಾಡುವುದು} ಪ್ರಯೋಗ ಮಾಡಿದ. ತಕ್ಷಣ, ತುಳಸಿದಾಸರ ಎರಡೂ ಕೈಗಳು ಸ್ವಾಧೀನ ತಪ್ಪಿ, ನಿಶ್ಚೇಷ್ಟಿತವಾದವು! ಅಷ್ಟಕ್ಕೇ ನಿಲ್ಲದೆ, ಮೈಯೆಲ್ಲಾ ಅಸಹನೀಯ ಯಾತನೆ ಕೊಡುವ ಗುಳ್ಳೆಗಳು ಎದ್ದವು. ಕುಳಿತುಕೊಳ್ಳಲೂ ಆಗದಂತಹ ಘೋರ ವೇದನೆ! ಬೆನ್ನಿನ ಗುಳ್ಳೆಗಳು ಒಡೆದು ರಕ್ತ-ಕೀವು ಸುರಿಯುತ್ತಿತ್ತು. ನಲವತ್ತು ದಿನಗಳ ಕಾಲ ಅವರು ನಿಂತುಕೊಂಡೇ ಕಳೆಯಬೇಕಾಯಿತು.

ಒಂದು ದಿನ, ಆ ಯಾತನೆ ತಾಳಲಾರದೆ ಅವರು ಕಣ್ಣೀರಿಟ್ಟರು. “ಸ್ವಾಮಿ ಶ್ರೀರಾಮಚಂದ್ರಾ! ಈ ನೋವು ನಿನಗೆ ಕಾಣುತ್ತಿಲ್ಲವೇ? ನೀನು ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ… ಸರಿ, ಬೇರೆ ಭಕ್ತರ ಮೊರೆ ಕೇಳುತ್ತಿರಬಹುದು. ಆದರೆ ನನ್ನ ಪ್ರೀತಿಯ ಆಂಜನೇಯ ಸ್ವಾಮಿಯೂ ನನ್ನನ್ನು ಪಟ್ಟಿಸಿಕೊಳ್ಳುತ್ತಿಲ್ಲವಲ್ಲ!” ಎಂದು ದುಃಖಿಸುತ್ತಾ, ತಮ್ಮ ವೇದನೆಯನ್ನೇ 44 ದೋಹೆಗಳಾಗಿ (ಪದ್ಯ) ಹೇಳಿದರು.

ಪವಾಡವೆಂದರೆ, ಅವರು ಮೊದಲ ದೋಹೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ಒಂದೊಂದೇ ಗುಳ್ಳೆ ಮಾಯವಾಗತೊಡಗಿತು! 44ನೇ ದೋಹೆಯನ್ನು ಮುಗಿಸುವಷ್ಟರಲ್ಲಿ, ಅವರ ಕೈಗಳು ಮೊದಲಿನಂತೆ ಚೈತನ್ಯ ಪಡೆದಿದ್ದವು, ಮೈಮೇಲಿನ ಎಲ್ಲಾ ಗುಳ್ಳೆಗಳೂ ಸಂಪೂರ್ಣವಾಗಿ ಮಾಯವಾಗಿದ್ದವು! ಯಾತನೆಯಿಂದ ಹೊರಬಂದ ಆ ಮಹಾನ್ ಸ್ತೋತ್ರವೇ ಹನುಮಾನ್ ಬಾಹುಕ್. ಯಾವುದೇ ದುಷ್ಟ ಪ್ರಯೋಗ, ರೋಗಬಾಧೆಯಿಂದ ಬಳಲುವವರಿಗೆ ಇದು ಇಂದಿಗೂ ಸಂಜೀವಿನಿ.

ಇದೇ ಸಮಯದಲ್ಲಿ ತುಳಸಿದಾಸರು , ಸಂಸ್ಕೃತ ತಿಳಿಯದ ಜನಸಾಮಾನ್ಯರಿಗಾಗಿ ರಾಮಚರಿತಮಾನಸ ಎಂಬ ಮಹಾಗ್ರಂಥವನ್ನು ಜನಭಾಷೆಯಲ್ಲಿ ರಚಿಸಿದರು. ಅದರ ಕೀರ್ತಿ ಎಲ್ಲೆಡೆ ಹರಡಿತು. ತಾಳೆಗರಿಯಲ್ಲಿದ್ದ ಆ ಏಕೈಕ ಪ್ರತಿಯನ್ನು ಕೇಳಲು ತುಳಸಿ ಘಾಟ್‌ನಲ್ಲಿ ಸಾವಿರಾರು ಜನ ಸೇರುತ್ತಿದ್ದರು. ಇದನ್ನು ಸಹಿಸದ ಭೈರವನಾಥ, ಇಬ್ಬರು ಕಳ್ಳರನ್ನು ಕರೆದು ಆ ಗ್ರಂಥವನ್ನು ಕದ್ದೊಯ್ಯಲು ಕಳುಹಿಸಿದ.

ರಾತ್ರಿವೇಳೆ, ಕಳ್ಳರು ಆಶ್ರಮಕ್ಕೆ ನುಗ್ಗಿದರು. ಅವರು ಗ್ರಂಥವನ್ನು ಮುಟ್ಟಲು ಪ್ರಯತ್ನಿಸುತ್ತಿದ್ದಂತೆಯೇ, ಎಲ್ಲಿಂದಲೋ ಬಾಣ ಹಿಡಿದ ಇಬ್ಬರು ದಿವ್ಯ ಸುಂದರ ಬಾಲಕರು ಪ್ರತ್ಯಕ್ಷರಾದರು! ಅವರು ಕಳ್ಳರನ್ನು ಬಾಣಗಳಿಂದ ಹೊಡೆಯಲು ಪ್ರಾರಂಭಿಸಿದರು. ನೋವು ತಾಳಲಾರದೆ ಕಳ್ಳರು ಓಡಿದರೆ, ಆ ಬಾಲಕರೂ ಅಟ್ಟಿಸಿಕೊಂಡು ಹೋಗಿ ಥಳಿಸಿದರು.

ಮರುದಿನ ಬೆಳಿಗ್ಗೆ, ಆ ಕಳ್ಳರೇ ಅಳುತ್ತಾ ತುಳಸಿದಾಸರ ಪಾದಕ್ಕೆ ಬಿದ್ದರು! “ಸ್ವಾಮಿ, ಕ್ಷಮಿಸಿ. ನಾವು ಕದಿಯಲು ಬಂದೆವು. ಆದರೆ ನೀವು ಕಾವಲಿಟ್ಟಿದ್ದ ಆ ಇಬ್ಬರು ಹುಡುಗರು ನಮ್ಮನ್ನು ಚೆನ್ನಾಗಿ ದಂಡಿಸಿದರು.” ಅವರು ಮುಂದುವರಿಸಿ, “ಸ್ವಾಮಿ, ಆ ನೋವಿಗಿಂತ ಆಶ್ಚರ್ಯವೆಂದರೆ ಅವರ ಸೌಂದರ್ಯ! ಆ ನೀಲಿ ವರ್ಣದ ಬಾಲಕನ ಸಮ್ಮೋಹನ ರೂಪವಿದೆಯಲ್ಲ… ಅವನು ಬಾಣ ಹೊಡೆಯುತ್ತಿದ್ದರೂ, ಆ ನೋವಿನಲ್ಲೂ ಅವನ ಮುಖವನ್ನೇ ನೋಡಬೇಕೆನಿಸುತ್ತಿತ್ತು! ದಯವಿಟ್ಟು ಆ ಬಾಲಕರನ್ನು ಮತ್ತೊಮ್ಮೆ ಕರೆಯಿರಿ, ಅವರ ದರ್ಶನ ಪಡೆದು ಹೋಗುತ್ತೇವೆ!” ಎಂದರು. ಈ ಮಾತು ಕೇಳುತ್ತಿದ್ದಂತೆ, ತುಳಸಿದಾಸರು ಗೋಳಾಡತೊಡಗಿದರು. “ಶ್ರೀರಾಮಚಂದ್ರಾ! ಇದು ನ್ಯಾಯವೇ? ಇಷ್ಟು ದಿನ ಉಪಾಸನೆ ಮಾಡಿದ ನನಗೆ ದರ್ಶನ ಕೊಡಲಿಲ್ಲ. ನಿನ್ನ ಗ್ರಂಥ ಕದಿಯಲು ಬಂದ ಕಳ್ಳರಿಗೆ ದರ್ಶನ ಕೊಟ್ಟೆಯಾ! ನನ್ನ ಜನ್ಮವೇ ವ್ಯರ್ಥ!”

ಶ್ರೀರಾಮನ ದರ್ಶನಕ್ಕಾಗಿ ತುಳಸಿದಾಸರ ತಪನೆ ಹೆಚ್ಚಾಯಿತು. ಅವರು ಪ್ರತಿದಿನ ಸಂಧ್ಯಾವಂದನೆಯ ನೀರನ್ನು ಒಂದು ಮರದ ಬುಡಕ್ಕೆ ಹಾಕುತ್ತಿದ್ದರು. ಒಂದು ದಿನ, ಆ ಶಕ್ತಿಯಿಂದ ಮುಕ್ತಿ ಪಡೆದ ಅಲ್ಲಿದ್ದ ಬ್ರಹ್ಮರಾಕ್ಷಸನು ಪ್ರತ್ಯಕ್ಷನಾಗಿ, “ಸ್ವಾಮಿ, ನಿಮ್ಮಿಂದ ಮುಕ್ತಿ ಪಡೆದೆ. ವರ ಕೇಳಿ,” ಎಂದನು. ತುಳಸಿದಾಸರು, “ಶ್ರೀರಾಮ ದರ್ಶನ ಮಾಡಿಸು,” ಎಂದರು.

“ಅದು ನನ್ನಿಂದ ಅಸಾಧ್ಯ,” ಎಂದ ಬ್ರಹ್ಮರಾಕ್ಷಸ, “ಆದರೆ ಒಂದು ರಹಸ್ಯ ಹೇಳುತ್ತೇನೆ. ಪ್ರತಿದಿನ ನಿಮ್ಮ ಕೀರ್ತನೆಗೆ ಒಬ್ಬ ವೃದ್ಧ ಮುದುಕ ಬರುತ್ತಾನೆ. ಎಲ್ಲರಿಗಿಂತ ಮೊದಲು ಬಂದು, ಕಣ್ಣೀರು ಹಾಕುತ್ತಾ ಕಥೆ ಕೇಳಿ, ಕೊನೆಗೆ ಹೋಗುತ್ತಾನೆ. ಅವನ ಪಾದ ಹಿಡಿ.” ಎಂದು ಹೇಳಿ ಮಾಯವಾದ.

ಮರುದಿನ ಕೀರ್ತನೆ ಮುಗಿದ ನಂತರ, ಕಣ್ಣೊರೆಸಿಕೊಳ್ಳುತ್ತಿದ್ದ ಆ ವೃದ್ಧನ ಪಾದಗಳನ್ನು ತುಳಸಿದಾಸರು ಬಿಗಿಯಾಗಿ ಹಿಡಿದುಕೊಂಡರು. “ಸ್ವಾಮಿ! ನೀವೇ ನನಗೆ ಶ್ರೀರಾಮನ ದರ್ಶನ ಮಾಡಿಸಬೇಕು!” ಎಂದರು ಭಕ್ತಿಗೆ ಸೋತ ಮುದುಕನು, “ನಾಳೆ ಮಧ್ಯಾಹ್ನ ಇದೇ ಮರದ ಕೆಳಗೆ ಕುಳಿತುಕೋ. ಶ್ರೀರಾಮರ ದರ್ಶನ ದೊರಕುವುದು,” ಎಂದು ಆಶೀರ್ವದಿಸಿದ.

ತುಳಸಿದಾಸರಿಗೆ ಪರಮಾನಂದ! “ರಾಮ ಬಂದರೆ ಸ್ವತಃ ಗಂಧ ಹಚ್ಚಬೇಕು” ಎಂದು, ಬೆಳಿಗ್ಗೆಯಿಂದಲೇ ಗಂಧವನು ತಂದು ಕುಳಿತರು. ‘ಆಹಾ! ನನ್ನ ಶ್ರೀರಾಮ ಬರುವನು!’ ಎಂಬ ಭಾವಪರವಶತೆಯಲ್ಲೇ ಅವರು ಸಮಾಧಿ ಸ್ಥಿತಿಗೆ ಜಾರಿದರು.

ಅವರು ಕಣ್ಮುಚ್ಚಿ ಒಳಗಿನ ರಾಮನನ್ನು ನೋಡುತ್ತಿದ್ದರೆ, ಹೊರಗೆ ಸಾಕ್ಷಾತ್ ಶ್ರೀರಾಮನೇ ಬಂದನು! ಬೆಳಿಗ್ಗೆಯಿಂದ ತನ್ನ ಭಕ್ತ ತೈದ ಗಂಧವನ್ನು ತೆಗೆದು, ತನಗೂ ಹಚ್ಚಿಕೊಂಡು, ಸಮಾಧಿಯಲ್ಲಿದ್ದ ತುಳಸಿದಾಸರಿಗೂ ಹಚ್ಚಿ, ಮಂದಹಾಸ ಬೀರುತ್ತಾ ‘ಇಗೋ ನಿನ್ನ ಕೀರ್ತನೆಯನ್ನು ಕೇಳಲು ಬರುತ್ತಿದ್ದ ಆ ಮುದುಕ ಬೇರೆ ಯಾರು ಅಲ್ಲ ನನ್ನ ಪರಮ ಭಕ್ತ ಹನುಮನ’ ಎಂದು ಹೇಳಿ ಹೊರಟುಹೋದನು!

ಸಮಾಧಿಯಿಂದ ಹೊರಬಂದಾಗ ಅದು ರಾತ್ರಿ, ತುಳಸಿದಾಸರು “ಆಂಜನೇಯಾ! ಕೇಸರಿ ನಂದನ! ನನ್ನ ರಾಮಾಯಣ ಕೇಳಲು ವೃದ್ಧ ರೂಪದಲ್ಲಿ ಬರುತ್ತಿದ್ದದ್ದು ನೀನಾ ಸ್ವಾಮಿ!” ಎಂದು ಹುಚ್ಚರಂತೆ ಆ ಮಧ್ಯರಾತ್ರಿ ವಾರಣಾಸಿಯ ಬೀದಿಗಳಲ್ಲಿ ಓಡಿದರು. ಮುಳ್ಳುಗಳು ಚುಚ್ಚಿದರೂ ಅರಿವಾಗಲಿಲ್ಲ. ಹಾಗೆ ಓಡುತ್ತಾ ಒಂದು ಕಲ್ಲಿಗೆ ಇನ್ನೊಂದು ಕಾಲುಗೆ ತಾಗಿ ಬೀಳುವುದರಲ್ಲಿದ್ದಾಗ, ಎರಡು ಅದೃಶ್ಯ ಹಸ್ತಗಳು ಅವರನ್ನು ಬಿಗಿಯಾಗಿ ಅಪ್ಪಿಕೊಂಡವು! ಆ ಕೈಗಳಲ್ಲಿ ದಟ್ಟವಾದ ರೋಮಗಳಿದ್ದವು, ಪ್ರತಿ ರೋಮದಲ್ಲೂ ‘ರಾಮ’ ನಾಮ! ಅವರು ತಲೆಯೆತ್ತಿ ನೋಡಿದರೆ… ಸಾಕ್ಷಾತ್ ಆಂಜನೇಯ ಸ್ವಾಮಿ!

ಆ ಆನಂದಭಾಷ್ಪದಲ್ಲಿ, ತುಳಸಿದಾಸರು ತಕ್ಷಣವೇ ಎಂಟು ಶ್ಲೋಕಗಳ ಸ್ತೋತ್ರವನ್ನು ರಚಿಸಿದರು. ಅದೇ ದಿವ್ಯ ಸ್ತೋತ್ರ ಸಂಕಟಮೋಚನ ಹನುಮಾನ್ ಸ್ತೋತ್ರ . ಆಂಜನೇಯನು ಎಲ್ಲಿ ಸಾಕ್ಷಾತ್ಕಾರ ನೀಡಿದನೋ, ಅದೇ ಸ್ಥಳದಲ್ಲಿ ತುಳಸಿದಾಸರು ‘ಸಂಕಟಮೋಚನ’ ದೇವಾಲಯವನ್ನು ಪ್ರತಿಷ್ಠಾಪಿಸಿದರು.

ಯತ್ರ ಯತ್ರ ರಘುನಾಥಕೀರ್ತನಂ | ತತ್ರ ತತ್ರ ಕೃತಮಸ್ತಕಾಂಜಲಿಮ್| ಬಾಷ್ಪವಾರಿಪರಿಪೂರ್ಣಾಲೋಚನಂ | ಮಾರುತಿಂ ನಮತ ರಾಕ್ಷಸಾನ್ತಕಮ್ ||

ಇಲ್ಲಿಗೆ ಒಬ್ಬ ಮಹಾಪುರುಷನ, ಒಬ್ಬ ಮಹಾ ಭಕ್ತನ ಸಣ್ಣ ಚಿರಪರಿಚಯ ನಿಮಗಾಯಿತೆಂದು ನಾನು ಭಾವಿಸುವೆ.

ಇಂತಿ, ಅರಿವು


메타데이터
post_id
21f8167b76ee
slug
ಹನುಮಂತನೊಲಿದ-ಪರಮ-ಭಕ್ತ-21f8167b76ee
url
https://medium.com/@suvyakta/%E0%B2%B9%E0%B2%A8%E0%B3%81%E0%B2%AE%E0%B2%82%E0%B2%A4%E0%B2%A8%E0%B3%8A%E0%B2%B2%E0%B2%BF%E0%B2%A6-%E0%B2%AA%E0%B2%B0%E0%B2%AE-%E0%B2%AD%E0%B2%95%E0%B3%8D%E0%B2%A4-21f8167b76ee
canonical_url
https://medium.com/@suvyakta/%E0%B2%B9%E0%B2%A8%E0%B3%81%E0%B2%AE%E0%B2%82%E0%B2%A4%E0%B2%A8%E0%B3%8A%E0%B2%B2%E0%B2%BF%E0%B2%A6-%E0%B2%AA%E0%B2%B0%E0%B2%AE-%E0%B2%AD%E0%B2%95%E0%B3%8D%E0%B2%A4-21f8167b76ee
author_url
https://medium.com/@suvyakta
status
ok
fetched_at
2026-07-13 06:23:13