← Back to list

ಕಟಕಟೆಯಲ್ಲಿ ಮಹಾವ್ರತ — ೩

ಸಂಜಯ ಉವಾಚ!

ಆಕಡೆ ಒಂಚೂರ್ ಈಕಡೆ ಒಂಚೂರ್ · 2026-07-12 15:58 · 4 claps · 2.4 min read
#mahabharata #bhishma #bhagavad-gita #courtroom
Open on Medium ↗
Wiki topics: ⚖️ · Law & Justice

ಕಟಕಟೆಯಲ್ಲಿ ಮಹಾವ್ರತ — ೩

ಸಂಜಯನು ಕ್ಷಣಕಾಲ ಮೌನವಾಗಿ ನಿಂತನು. ಭೀಷ್ಮರ ಉತ್ತರವನ್ನು ಮನಸ್ಸಿನೊಳಗೆ ಮತ್ತೊಮ್ಮೆ ಅಳೆದು ನೋಡಿದವನಂತೆ ಕಣ್ಣು ಮುಚ್ಚಿ, ನಿಧಾನವಾಗಿ ತಲೆಯೆತ್ತಿ ತಾತನ ಕಣ್ಣನ್ನೇ ನೋಡಿದನು.

“ಒಪ್ಪಿದೆ ತಾತ...

ನಿಮ್ಮ ಉತ್ತರ ಕೇಳಿದ ಮೇಲೆ ಒಂದು ವಿಷಯದಲ್ಲಿ ನನ್ನ ಮನಸ್ಸಿಗೆ ಯಾವ ಸಂದೇಹವೂ ಉಳಿದಿಲ್ಲ. ನೀವು ಮಾಡಿದ ಪ್ರತಿಜ್ಞೆ ಅಧಿಕಾರಕ್ಕಾಗಿ ಅಲ್ಲ, ಆಸೆಗಾಗಿ ಅಲ್ಲ, ಅಹಂಕಾರಕ್ಕಾಗಿಯೂ ಅಲ್ಲ. ಒಬ್ಬ ಮಗನಾಗಿ ತನ್ನ ತಂದೆಯ ಸಂತೋಷಕ್ಕಾಗಿ ತನ್ನ ಜೀವನವನ್ನೇ ಸಮರ್ಪಿಸಬಲ್ಲ ವಿಶಾಲ ಹೃದಯ ನಿಮಗಿತ್ತು. ನಿಮ್ಮ ನಿಷ್ಕಾಮತೆ, ನಿಮ್ಮ ತ್ಯಾಗ, ನಿಮ್ಮ ವಚನಪಾಲನೆ—ಇವೆಲ್ಲವೂ ನಿಮ್ಮನ್ನು ದೇವವ್ರತನಿಂದ ಭೀಷ್ಮನನ್ನಾಗಿ ರೂಪಿಸಿದವು ಎಂಬುದರಲ್ಲಿ ಯಾರಿಗೂ ಎರಡು ಮಾತಿಲ್ಲ.

ಒಂದರ್ತಿದಲ್ಲಿ ಕಾಲ ನಿಮ್ಮನ್ನು ಕಲ್ಪನಾತೀತ ವ್ಯಕ್ತಿಯನ್ನಾಗಿ ಮಾಡಿತು ಎಂದರೆ, ಕಾಲನಿಗೂ ಕಾಲು ನೋವು ಬಂದಿರಬಹುದು ಅಷ್ಟು ಸುತ್ತಾಡಿದ್ದಾನೆ ನಿಮ್ಮ ಜೀವನದಲ್ಲಿ.

ಆದ್ದರಿಂದಲೇ ತಾತ, ನಿಮ್ಮ ಸಜ್ಜನಿಕೆಯನ್ನು ಪ್ರಶ್ನಿಸುವ ಧೈರ್ಯ ನನಗಿಲ್ಲ. ನಿಮ್ಮ ಪ್ರಾಮಾಣಿಕತೆಯನ್ನು ಅಲ್ಲಗಳೆಯುವ ಉದ್ದೇಶವೂ ಇಲ್ಲ. ನಿಮ್ಮ ಉತ್ತರಗಳು ಪ್ರಶ್ನೆಗಳನ್ನೇ ತತ್ತರಿಸುವಷ್ಟು ಸ್ಪಷ್ಟವಾಗಿವೆ. ನಿಮ್ಮ ವಿವೇಕ ಧರ್ಮದ ಕನ್ನಡಿಯಂತೆ ನಿರ್ಮಲವಾಗಿದೆ.

ಆದರೆ...

ಧರ್ಮದ ಕನ್ನಡಿಯೂ ಕೆಲವೊಮ್ಮೆ ಎದುರಿಗೆ ನಿಂತವನ ಮುಖವನ್ನಷ್ಟೇ ತೋರಿಸುತ್ತದೆ; ಅವನ ಹಿಂದೆ ನಿಂತವರ ನೋವನ್ನು ತೋರಿಸುವುದಿಲ್ಲ. ಅಲ್ಲಿಯೇ ನನ್ನ ಮುಂದಿನ ಪ್ರಶ್ನೆ ಹುಟ್ಟುತ್ತದೆ.

ತಂದೆಯ ಸುಖಕ್ಕಾಗಿ ನಿಮ್ಮ ಬದುಕನ್ನು ತ್ಯಾಗ ಮಾಡಿದಿರಿ. ಅದು ನಿಮ್ಮ ನಿರ್ಧಾರ. ನಿಮ್ಮ ಜೀವನದ ಮೇಲೆ ತೆಗೆದುಕೊಂಡ ನಿಮ್ಮ ಸ್ವಂತ ಆಯ್ಕೆ. ಆ ತ್ಯಾಗದ ಭಾರವನ್ನೂ ನೀವು ಹೊತ್ತಿರಿ. ಆದರೆ ತಾತ... ಮನುಷ್ಯನಿಗೆ ತನ್ನ ಬದುಕನ್ನು ತ್ಯಾಗ ಮಾಡುವ ಹಕ್ಕು ಇದ್ದಂತೆ, ಮತ್ತೊಬ್ಬರ ಬದುಕಿನ ಆಯ್ಕೆಯನ್ನು ನಿರ್ಧರಿಸುವ ಅಧಿಕಾರವಿದೆಯೇ?

ಇಲ್ಲಿಂದಲೇ ಕಾಶಿಯ ರಾಜಸಭೆ ನನ್ನ ಕಣ್ಣಮುಂದೆ ನಿಂತುಕೊಳ್ಳುತ್ತದೆ.

ಅಂಬೆ... ಅಂಬಿಕೆ... ಅಂಬಾಲಿಕೆ...

ಅವರು ಯುದ್ಧದಲ್ಲಿ ಗೆದ್ದು ತರುವ ಕೋಟೆಗಳಾಗಿರಲಿಲ್ಲ. ಅವರು ರಾಜ್ಯದ ಸಂಪತ್ತೂ ಅಲ್ಲ. ಯಾರೊಬ್ಬರ ವಿಜಯದ ಚಿಹ್ನೆಯೂ ಅಲ್ಲ. ಉಸಿರಿದ್ದ ಜೀವಗಳು. ಆಲೋಚಿಸುವ ಮನಸ್ಸುಗಳು. ಕನಸುಗಳಿದ್ದ ಹೆಣ್ಣುಮಕ್ಕಳು. ತಮ್ಮ ಬದುಕನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕಿಗಾಗಿ ಸ್ವಯಂವರ ಮಂಟಪದಲ್ಲಿ ನಿಂತಿದ್ದ ರಾಜಕುಮಾರಿಯರು.

ತಾತ... 'ಸ್ವಯಂವರ' ಎಂಬ ಪದವನ್ನು ನಾವು ಎಷ್ಟು ಸುಲಭವಾಗಿ ಉಚ್ಚರಿಸುತ್ತೇವೆ. ಆದರೆ ಅದರ ಅರ್ಥವನ್ನು ಎಷ್ಟು ಬಾರಿ ಯೋಚಿಸುತ್ತೇವೆ? 'ಸ್ವಯಂ' ಎಂದರೆ ತನ್ನದೇ. 'ವರ' ಎಂದರೆ ತಾನು ಆರಿಸಿಕೊಳ್ಳುವ ಜೀವನ ಸಂಗಾತಿ. ಅಂದರೆ ಆ ಸಭೆಯ ಕೇಂದ್ರದಲ್ಲಿ ನಿಂತಿದ್ದು ರಾಜರ ಬಲವಲ್ಲ, ಹೆಣ್ಣಿನ ಆಯ್ಕೆ. ಅವಳ ಇಚ್ಛೆ. ಅವಳ ಸ್ವಾತಂತ್ರ್ಯ. ತಾನು ಆಸೆ ಪಟ್ಟು ಒಪ್ಪಿದವನ ಮನವನು ಮನೆಯನ್ನು ಸೇರುವ ಕನಸುಗಳ ದ್ವಾರ!

ಆದರೆ ನೀವು ಆ ಸಭೆಗೆ ಬಂದ ಕ್ಷಣದಿಂದ ಏನಾಯಿತು ತಾತ?

ಧನುಸ್ಸಿನ ನಾದ ಕೇಳಿಸಿತು.ರಥದ ಚಕ್ರಗಳು ಗುಡುಗಿದವು. ರಾಜರು ಸೋತರು. ಆದರೆ ನಿಜವಾಗಿಯೂ ಸೋತವರು ಅವರೇನಾ?

ಅಥವಾ... ಆ ದಿನ ಸೋತದ್ದು ಒಬ್ಬ ಹೆಣ್ಣಿನ ಇಚ್ಛೆಯೇ?

ನೀವು ಗೆದ್ದು ತಂದದ್ದು ಮೂರು ರಾಜಕುಮಾರಿಯರನ್ನಲ್ಲ ತಾತ; ಅವರ ಬದುಕಿನ ಮೇಲಿನ ಅವರ ಅಧಿಕಾರವನ್ನು.

ಒಂದು ಪ್ರಶ್ನೆ ಕೇಳುತ್ತೇನೆ...

ಆ ದಿನ ರಥಕ್ಕೆ ಅವರನ್ನು ಏರಿಸುವ ಮೊದಲು, ಒಮ್ಮೆ ಆದರೂ ಅಂಬೆಯ ಕಣ್ಣನ್ನು ನೋಡಿದಿರಾ? ಅವಳ ಮನಸ್ಸಿನಲ್ಲಿ ಈಗಾಗಲೇ ಯಾರಾದರೂ ಇದ್ದಾರೆಯೇ ಎಂದು ಯೋಚಿಸಿದಿರಾ? ಅವಳ ಇಚ್ಛೆ ಏನು ಎಂದು ಕೇಳಬೇಕೆಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಒಂದು ಕ್ಷಣವಾದರೂ ಮೂಡಿತೇ? ಇಲ್ಲವೇ, ಕ್ಷತ್ರಿಯ ಧರ್ಮದ ಹೆಸರಿನಲ್ಲಿ ಆ ಪ್ರಶ್ನೆಯೇ ಅನಗತ್ಯವೆಂದು ಭಾವಿಸಿದಿರಾ?

ಇನ್ನೊಂದು ವಿರೋಧಾಭಾಸ ನನ್ನನ್ನು ಕಾಡುತ್ತದೆ ತಾತ.

ನೀವು ಬ್ರಹ್ಮಚರ್ಯವನ್ನು ಪ್ರತಿಜ್ಞೆ ಮಾಡಿದವರು. ನಿಮ್ಮ ಜೀವನದಲ್ಲಿ ವಿವಾಹಕ್ಕೆ ಸ್ಥಾನವಿಲ್ಲವೆಂದು ಲೋಕದ ಮುಂದೆ ಘೋಷಿಸಿದವರು. ತಾವು ಹಾಸ್ತಿನಾವತಿಯ ಸಿಂಹಾಸನ ಕಾಯುತ್ತೇನೇ ಎಂದದ್ದೋ? ಇಲ್ಲ ಮದುವೆಯ ದಲ್ಲಾಳಿ ಆಗುತ್ತೇನೆ ಎಂದದ್ದೋ

ಒಬ್ಬ ಹೆಣ್ಣಿನ ಬದುಕಿನಲ್ಲಿ ಪತಿಯಾಗುವ ಹಕ್ಕನ್ನು ನೀವೇ ತ್ಯಜಿಸಿದ್ದಿರಿ, ಹಾಗಿರುವಾಗ, ಮತ್ತೊಬ್ಬ ಹೆಣ್ಣಿನ ಬದುಕಿನಲ್ಲಿ ಪತಿ ಯಾರು ಎಂಬುದನ್ನು ನಿರ್ಧರಿಸುವ ಹಕ್ಕನ್ನು ನಿಮಗೆ ಕೊಟ್ಟವರು ಯಾರು?

ಹೋಗಲಿ ಚಿತ್ರ ವಿಚಿತ್ರ ವೀರ್ಯರನ್ನೇ ಆ ಮಟ್ಟಕ್ಕೆ ಬೆಳಸಿ ಅವರನ್ನೇ ಕರೆದೋಯ್ದು ಗೆಲ್ಲಿಸಬಹಿದಿತ್ತಲ್ಲ? ಆಗ ತಮಗೆ 64 ವಿದ್ಯೆಗಳ ವಿನಿಮಯ ತಿಳಿಯಲಿಲ್ಲವೋ? ತಾವು ಊರಿಗೆಲ್ಲ ನೀತಿ ಹೇಳುವಾಗ

ಅಹಂ ರಾಷ್ಟ್ರೀ ಸಙ್ಗಮನೀ ವಸೂನಾಂ ಚಿಕಿತುಷೀ ಪ್ರಥಮಾ ಯಜ್ಞಿಯಾನಾಮ್।

ತಾಂ ಮಾ ದೇವಾ ವ್ಯದಧುಃ ಪುರುತ್ರಾ ಭೂರಿಸ್ಥಾತ್ರಾಂ ಭೂರ್ಯಾವೇಶಯನ್ತೀಮ್॥೩॥

ಎಂಬ ಋಷಿ ವಾಕ್ಯ ಮರೆತೇ ಹೋಯಿತೇ? ಆ ದೇವಿಯರಿಗೆ ಈ ದೇವವ್ರತನ ಮಾರುತ ಹೀಗೋ?

ವಾರಣ ಅಸಿಯಲ್ಲಿ ತಾವು ಆಶಿಸಿದ್ದು ಧರ್ಮವೇ? ರಾಜಧರ್ಮವೇ?ಕ್ಷತ್ರಿಯ ಸಂಪ್ರದಾಯವೇ? ಅಥವಾ ಅಧಿಕಾರವೇ?

ಸಂಪ್ರದಾಯ ಎಂದು ಹೇಳಬಹುದು ತಾತ. ಆ ಕಾಲದ ಕ್ಷತ್ರಿಯರಲ್ಲಿ ಇದು ರೂಢಿಯಾಗಿತ್ತು ಎಂದೂ ಹೇಳಬಹುದು. ಆದರೆ ಒಂದು ಪದ್ಧತಿ ಬಹಳ ಕಾಲದಿಂದ ಇದೆ ಎನ್ನುವುದೇ ಅದು ಧರ್ಮ ಎಂಬುದಕ್ಕೆ ಸಾಕ್ಷಿಯಲ್ಲ. ನೂರಾರು ವರ್ಷಗಳಿಂದ ನಡೆಯುತ್ತಿರುವ ಅನ್ಯಾಯವೂ ಸಂಪ್ರದಾಯವಾಗಿರಬಹುದು. ಆದರೆ ಅನ್ಯಾಯವೇ ಧರ್ಮವಾಗುವುದಿಲ್ಲ. ಲಾಗ ಹಾಕುತ್ತದೆ ಕೋತಿ ಪಂಗಡಗಳಲ್ಲಿ ಯಾವುದೊ ಒಂದು ಕೋತಿ ಅದನ್ನು ಬಿಟ್ಟದ್ದಕ್ಕೆ ಅಲ್ಲವೇ ಇಂದು ಮಾನವ ಇರುವುದು!

ನೀವೇ ಈಗ ಹೇಳಿದಿರಿ...

ಧರ್ಮವೆಂದರೆ ಆ ಕ್ಷಣದಲ್ಲಿ ಮನಸ್ಸಿಗೆ ತಿಳಿದ ಸತ್ಯಕ್ಕೆ ಕೊಡುವ ಉತ್ತರ ಎಂದು.

ಹಾಗಾದರೆ ಆ ಕ್ಷಣದಲ್ಲಿ ನಿಮ್ಮ ಮನಸ್ಸು ಮತ್ತೊಂದು ಸತ್ಯವನ್ನು ಏಕೆ ಕಾಣಲಿಲ್ಲ ತಾತ?

ಆ ಸತ್ಯದ ಹೆಸರು 'ಅಂಬೆ'. ಅವಳಿಗೂ ಒಂದು ಮನಸ್ಸಿತ್ತು. ಒಂದು ಪ್ರೀತಿ ಇತ್ತು. ಒಂದು ಕನಸು ಇತ್ತು. ಆದರೆ ಆ ಎಲ್ಲವೂ ನಿಮ್ಮ ವಿಜಯದ ರಥದ ಚಕ್ರಗಳ ಕೆಳಗೆ ನುಚ್ಚುನೂರಾಗಲಿಲ್ಲವೇ?

ಆದ್ದರಿಂದಲೇ ಇಂದು ನನ್ನ ಪ್ರಶ್ನೆ ಕೇವಲ ಅಂಬೆಯ ಪರವಾಗಿ ಅಲ್ಲ.

ಇದು ಇತಿಹಾಸದುದ್ದಕ್ಕೂ ಮೌನಗೊಳಿಸಲ್ಪಟ್ಟ ಪ್ರತಿಯೊಬ್ಬ ಹೆಣ್ಣಿನ ಪರವಾಗಿ.

ಅವಳು ರಾಜ್ಯದ ಆಸ್ತಿಯೇ? ಕುಲದ ಗೌರವವೇ? ರಾಜಕೀಯದ ಒಪ್ಪಂದವೇ?ಅಥವಾ ತನ್ನ ಬದುಕನ್ನು ತಾನೇ ನಿರ್ಧರಿಸುವ ಆತ್ಮವೇ? ನೆನಪಿರಲಿ ನಿಮ್ಮ ತಂದೆಯು ಗಂಗೆಗೆ ಬೆಲೆ ಕೊಟ್ಟು ನಿಮ್ಮ ಮುಂಚೆ ಬಂದ ಅನೇಕ ಅಗ್ರಜರನ್ನು ಅಜನ ಮನೆಗೆ ಧಾರೆ ಬಿಟ್ಟಿದ್ದಾರೆ, ಆ ತಾಯಿಯ ಕೊನೆಯ ಮಗನಾಗಿ ಪಾಪ ಶಮನಿಯ ಸುತನೇ? ಮಹಿಳಾ ಪಾಪಿಯೋ? ತಾವು ಅಂದು ಮಾಡಿದ್ದು ಈಗ ಮಾಡಿದರೆ ನಾಳೆಯೇ ನಿಮ್ಮನ್ನು ಶರದ ಶಯ್ಯೇಯಲ್ಲಿ ಶಿರವಿಲ್ಲದೆ ಮಲಗಿಸುತ್ತಿದ್ದರು

ಹೇಳಿ ತಾತ...

ಕಾಶಿಯ ರಾಜಸಭೆಯಿಂದ ನೀವು ಹಸ್ತಿನಾಪುರಕ್ಕೆ ಕರೆತಂದದ್ದು ಕೇವಲ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನೇ?

ಅಥವಾ, ಹೆಣ್ಣಿನ ಇಚ್ಛೆಯನ್ನು ಪುರುಷನ ಧರ್ಮದ ಹೆಸರಿನಲ್ಲಿ ಮೀರಿ ಹೋಗಬಹುದು ಎಂಬ ಅಪಾಯಕಾರಿ ಪರಂಪರೆಯನ್ನೋ?

— ಸುಮೇರು


메타데이터
post_id
28f7dbdf41c6
slug
ಕಟಕಟೆಯಲ್ಲಿ-ಮಹಾವ್ರತ-೩-28f7dbdf41c6
url
https://medium.com/@suvyakta/%E0%B2%95%E0%B2%9F%E0%B2%95%E0%B2%9F%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%B9%E0%B2%BE%E0%B2%B5%E0%B3%8D%E0%B2%B0%E0%B2%A4-%E0%B3%A9-28f7dbdf41c6
canonical_url
https://medium.com/@suvyakta/%E0%B2%95%E0%B2%9F%E0%B2%95%E0%B2%9F%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%B9%E0%B2%BE%E0%B2%B5%E0%B3%8D%E0%B2%B0%E0%B2%A4-%E0%B3%A9-28f7dbdf41c6
author_url
https://medium.com/@suvyakta
status
ok
fetched_at
2026-08-31 07:26:42