ಮರುಕಳಿಸಿದ ಮಾತು
ಅವಳಿಂದ ಆದಿ, ಅನ್ಯರಿಗೆ ಹಾದಿ
ಮರುಕಳಿಸಿದ ಮಾತು
“What is a Reducing reagent?”
ಮೃದುಲಾ ತಲೆಯಲ್ಲಿ ಈ ಪ್ರಶ್ನೆಗೆ ಉತ್ತರ ಇತ್ತು, ಆದರೆ ಮಾತುಗಳು... ಮಾತುಗಳು ಹೊಸ ಭಾಷೆಯ ಗೋಡೆಯೊಂದರ ಆಚೆ ಸಿಕ್ಕಿಬಿದ್ದಿದ್ದವು. ಕನ್ನಡದ ಮೃದು ಲಯಕ್ಕೆ ಹೊಂದಿಕೊಂಡಿದ್ದ ಅವಳ ನಾಲಿಗೆ ಈಗ ಮೌನವಾಗಿತ್ತು.
ಮೃದುಲಾ ತನ್ನ ಮೆಟ್ರಿಕ್‌ವರೆಗಿನ ಶಿಕ್ಷಣವನ್ನು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ, 10ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಳು, ಅದರಲ್ಲೂ ಅವಳಿಗೆ ಅಚ್ಚುಮೆಚ್ಚಿನ ವಿಷಯಗಳೆಂದರೆ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ. ಈಗ ಅವಳು ಮುಂದಿನ ವಿದ್ಯಾಭ್ಯಾಸಕ್ಕೆ ರಾಜ್ಯದ ಅತ್ಯುತ್ತಮ ಕಾಲೇಜಿಗೆ ಸೇರಿಕೊಂಡಿದ್ದಳು.
ಮೇಲಿನ ಪ್ರಶ್ನೆಗೆ ಉತ್ತರ ತಿಳಿದಿದ್ದರೂ ಆಂಗ್ಲ ಭಾಷೆಯಲ್ಲಿ ಅದನ್ನು ವಿವರಿಸಲು ಆಗುತ್ತಿರಲಿಲ್ಲ. “ಕನ್ನಡದಲ್ಲೇ ಹೇಳಿಬಿಡೋಣ” ಎನ್ನುವಷ್ಟರಲ್ಲಿ ಶಿಕ್ಷಕರ ಮಾತು ಗುಂಡಿನಂತೆ ಬಂದು ಬಿತ್ತು, “Fundamentals ಎಲ್ಲಾ ತಿಳ್ಕೊಂಡಿರಬೇಕಮ್ಮ ಇಲ್ಲಾಂದ್ರೆ ತುಂಬಾ ಕಷ್ಟ ಆಗುತ್ತೆ” ಎಂದು ಹೇಳಿ ಕೂರಿಸಿದರು.
ಕಾಲೇಜಿನ ಮೊದಲ ದಿನದ ಮೊದಲ ತರಗತಿಯಲ್ಲಿ ಅವಳ ಆತ್ಮವಿಶ್ವಾಸದ ಗಾಜಿನ ಗೋಡೆ ಚೂರುಚೂರಾಗಿತ್ತು. ಇದರ ಜೊತೆ ಪಕ್ಕದಲ್ಲೇ ಕುಳಿತಿದ್ದ ಹುಡುಗಿ ಪಟಪಟನೇ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಕಂಡು ಮೌನವಾಗಿ ಕುಳಿತುಬಿಟ್ಟಳು.
ಅವಳಿಗೆ ಕಾಲೇಜಿನಲ್ಲಿ ಒಂದು ರೀತಿಯ ಒಂಟಿತನ, ತನ್ನವರು ಎಂಬವರು ಯಾರೂ ಇಲ್ಲವೆನಿಸಿತು. ಸುತ್ತಲಿನವರ ಅಪರಿಚಿತ ಮಾತುಗಳು ಮತ್ತು ಹಾವಭಾವಗಳು ಅವಳ ಮನಸ್ಸನ್ನು ಕುಗ್ಗಿಸುತ್ತಿದ್ದವು. ಅತೀವ ನಿರೀಕ್ಷೆಯೊಂದಿಗೆ ಕಾಲಿಟ್ಟಿದ್ದ ಕಾಲೇಜಿನ ಮೊದಲ ದಿನವು ಮೌನವಾಗಿ ಮುಗಿದುಹೋಯಿತು.
ಮಾರನೇ ದಿನ, ಮೊದಲ ಬಾರಿ Chemistry Lab ಪ್ರವೇಶಿಸಿದ ಅವಳು, ಬರೀ ಕೇಳಿದ್ದ, ಓದಿದ್ದ ಉಪಕರಣಗಳನ್ನು ಕಣ್ಣಾರೆ ಕಂಡ ಸಂತೋಷದಿಂದ Test tube ತೆಗೆದು ನೋಡುತ್ತಿರಬೇಕಾದರೆ, ಪಕ್ಕನೆ ಕೈಜಾರಿ Test tube ಕೆಳಗೆ ಬಿತ್ತು. ದೂರದಲ್ಲಿ ನಿಂತ ಟೀಚರ್ ಇಂಗ್ಲಿಷ್‌ನಲ್ಲಿ ಬೈದು ಫೈನ್ ಕಟ್ಟಲು ಕಳಿಸಿದರು.
ಬೇಸರದಿಂದ ಹಾಸ್ಟೆಲ್ ಕಡೆಗೆ ಓಡಿದಳು. ತಂದಿದ್ದ ಬಟ್ಟೆ, ಪುಸ್ತಕಗಳನ್ನೆಲ್ಲಾ ಪ್ಯಾಕ್ ಮಾಡಿ “ಈ ದೊಡ್ಡ ಕಾಲೇಜು ನನ್ನಂತವರಿಗಲ್ಲ” ಎಂದು ಅಳುತ್ತಾ ಅಮ್ಮನಿಗೆ ಕಾಲ್ ಮಾಡುತ್ತಾಳೆ, ಅವಳ ಮಾತುಗಳನ್ನು ತಾಳ್ಮೆಯಿಂದ ಕೇಳಿ ಒಂದು ಕ್ಷಣ ಮೌನವಾಗಿ, “ನಮ್ಮ ಊರಿನಿಂದ ದೊಡ್ಡ ಶಾಲೆಗೆ ಹೋದ ಮೊದಲ ಹೆಣ್ಣುಮಗಳು ನೀನು, ನಿನ್ನಂತೆ ಆಸೆ ಇಟ್ಟುಕೊಂಡಿರೋ ಎಷ್ಟು ಹೆಣ್ಣುಮಕ್ಕಳ ಕನಸಿನ ಕದ ಮುಚ್ಚಿ ಬರುತ್ತೀಯಾ ಅನ್ನೋದಾದ್ರೆ ಈಗಲೇ ಬಂದ್ಬಿಡು,” “ಮಗಳೇ, ನೀನು ಶಾಲೆಗೆ ಪ್ರಥಮ ಬಂದಾಗ ಆಡಿದ ಮಾತುಗಳನ್ನು ನೆನಪಿಸಿಕೋ.” ಹಳ್ಳಿ ಶಾಲೆಯ ವೇದಿಕೆಯ ನೆನಪು ಅವಳ ಕಣ್ಣಮುಂದೆ ತೇಲಿತು, “ನಾನು ಒಬ್ಬ ವೈದ್ಯೆಯಾಗಿ, ನಮ್ಮ ಊರಿನಲ್ಲಿ ಒಂದು ದೊಡ್ಡ ಆಸ್ಪತ್ರೆ ಕಟ್ಟಿಸುತ್ತೇನೆ!”
ಆ ದಿನ ಅವಳ ಮಾತು ಕೇಳಿ ಕನಸುಗಳಿಂದ ಕಣ್ಣರಳಿದ ಎಷ್ಟೋ ಮಕ್ಕಳ ಆಶಯಗಳು ಈಗ ಅವಳ ಮೌನದ ಅಂತರಾಳದಲ್ಲಿ ಮರುಜನ್ಮ ತಾಳುತ್ತಿದ್ದವು. ಮುಂದಿನ ಹಾದಿ ಅವಳಿಗೆ ಅವಳ ಸಹಪಾಠಿಗಳಿಗಿಂತ ತುಂಬಾ ಕಷ್ಟಕರವಾಗಿದೆ ಅನ್ನುವುದು ಅವಳಿಗೆ ತಿಳಿಯಿತು.
“ಮೊದಲು ಇಂಗ್ಲಿಷ್ ಕಲಿಯಬೇಕು” ಎಂದು ಪುಸ್ತಕದ ಅಂಗಡಿಗೆ ಧಾವಿಸಿ ಪುಸ್ತಕ ತಂದಳು.
ರಾತ್ರಿಯ ಕತ್ತಲೆ ಕೋಣೆಯನ್ನು ಆವರಿಸಿತು, ದೇವರ ಮುಂದೆ ದೀಪ ಮಾತ್ರ ಇಣುಕುತ್ತಿತ್ತು. ಆ ಮಂದ ಬೆಳಕು ಅವಳ ಮನಸ್ಸಿಗೆ ಒಂದು ದಾರಿ ತೋರಿಸುತ್ತಿತ್ತು.

“ದೀಪದ ಬತ್ತಿ ಎಣ್ಣೆಯಲ್ಲಿ ಮುಳುಗದೆ ಹೋದರೆ ಸುಡಲಾಗದು, ಸುಡದೆ ಹೋದರೆ ಬೆಳಕಾಗಲಾರದು ಹಾಗೆಯೇ, ಈ ಹೊಸ ಜಗತ್ತಿನ ‘ಎಣ್ಣೆ’ಯಲ್ಲಿ, ಈ ಭಾಷೆ ಮತ್ತು ಪರಿಸರದಲ್ಲಿ ಮಿಂದು ಅದರೊಳಗೆ ಹೊಂದಿಕೊಳ್ಳದೆ ಹೋದರೆ ನನ್ನೊಳಗಿನ ಬೆಳಕು ಹೊರಹೊಮ್ಮಲಾರದು, ಕಷ್ಟವೆಂಬ ಅಗ್ನಿಯಲ್ಲಿ ಸುಡದೆ ಹೋದರೆ ನನ್ನ ಕನಸು ಮಾತ್ರ ಸಾಯುವುದಲ್ಲ, ನನ್ನ ಹಿಂದೆ ಬರುವ ನನ್ನ ಹಳ್ಳಿಯ ಎಲ್ಲ ಹುಡುಗಿಯರ ಕನಸುಗಳಿಗೂ ನಾನೇ ಕಲ್ಲಾಗಿ ನಿಲ್ಲುವೆ”.
ಈ ಆಲೋಚನೆಯ ತೀಕ್ಷ್ಣತೆಯೊಂದಿಗೆ, ದೀಪದ ಬೆಳಕಲ್ಲಿ ಅವಳ ಮುಖ ಗಂಭೀರವಾಯಿತು, ಹೊರಗೆ ಕತ್ತಲಾದರೂ ಒಳಗೆ ತನ್ನ ಗುರಿ ಸಾಧಿಸುವ ಹಂಬಲದ ಬೆಂಕಿ ಉರಿಯುತ್ತಿತ್ತು.
ಅಧ್ಯಯನದ ಪುಸ್ತಕಗಳ ಜೊತೆ ಆ ನಿಘಂಟು ಎಂಬ ನಕ್ಷೆಯನ್ನು ಹಿಡಿದು, ಜ್ಞಾನದ ಕಾಡಿನೊಳಗೆ ನಿಧಾನವಾಗಿ ಸಾಗಿದಳು, ವಿಷಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥಮಾಡಿಸುವ ಅವಳ ಸಹಜ ಪ್ರತಿಭೆಯಿಂದ ಅಲ್ಲಿ ಎಷ್ಟೋ ಜನರ ಸ್ನೇಹದ ಬಳ್ಳಿಗಳು ಅವಳ ಕಡೆ ಹಬ್ಬಿದವು.
ಮುಂದೆ ಅದೇ ಆಂಗ್ಲ ಭಾಷೆಯಲ್ಲಿ, ಅದೇ ಕಾಲೇಜಿನ ವೇದಿಕೆಯ ಮೇಲೆ ಭಾಷಣ ಮಾಡುವಾಗ ಹೀಗೆಂದಳು,
“My own voice sent out into the world, echoed back as a guide. It gave me the strength to learn a new way of being, not just for me, but to make the path wider for others.”
— ಸರಳೆ
메타데이터
- post_id
- 993ee953e8cc
- slug
- ಮರುಕಳಿಸಿದ-ಮಾತು-993ee953e8cc
- url
- https://medium.com/@suvyakta/%E0%B2%AE%E0%B2%B0%E0%B3%81%E0%B2%95%E0%B2%B3%E0%B2%BF%E0%B2%B8%E0%B2%BF%E0%B2%A6-%E0%B2%AE%E0%B2%BE%E0%B2%A4%E0%B3%81-993ee953e8cc
- canonical_url
- https://medium.com/@suvyakta/%E0%B2%AE%E0%B2%B0%E0%B3%81%E0%B2%95%E0%B2%B3%E0%B2%BF%E0%B2%B8%E0%B2%BF%E0%B2%A6-%E0%B2%AE%E0%B2%BE%E0%B2%A4%E0%B3%81-993ee953e8cc
- author_url
- https://medium.com/@suvyakta
- status
- ok
- fetched_at
- 2026-07-13 06:23:13