← Back to list

ಮತ್ತೆ ಆರಾಮ?

ನನ್ನ ಮನಸ್ಸಿನ ಮೊದಲ ಬೇಡಿಕೆ ಒಂದೇ: "ನೀನು ಚೆಂದದಲ್ಲಿದ್ದೀಯ" ಉಳಿದದ್ದೆಲ್ಲ ಅದರ ನಂತರ.

ಆಕಡೆ ಒಂಚೂರ್ ಈಕಡೆ ಒಂಚೂರ್ · 2026-07-30 07:52 · 6 claps · 1.4 min read
#thoughts #goodness #wellness #greetings #kannada
Open on Medium ↗
Wiki topics: 💪 · Fitness & Wellness

ಮತ್ತೆ ಆರಾಮ?

"ಆರಾಮ?" ಈ ಒಂದು ಪದವನ್ನು ನಾನು ನಿನಗೆ ಎಷ್ಟು ಬಾರಿ ಕೇಳಿದ್ದೇನೋ ನನಗೇ ಗೊತ್ತಿಲ್ಲ. ತಿಳಿದು ತಿಳಿಯದೆ, ಅರಿತು ಅರಿಯದೆ, ಮರೆತು ಮರೆಯದೆ ಮಳೆಯೂ ಹಠತ್ ಎಂದು ಬರುವಂತೆ ಸುರಿಯುವ ಆ ಪ್ರಶ್ನೆಗಳ ಸಾಲದು, ಪ್ರತಿಬಾರಿಯೂ ಕೇಳಿದಾಗ ಹೊಸದೊಂದು ಅರ್ಥ ಸಿಕ್ಕಿದೆ ಎಂದರೆ ನೀನು ನಂಬುತ್ತೀಯ? ಮೊದಲು ಅದು ಒಂದು ಪ್ರಶ್ನೆಯಾಗಿತ್ತು. ನಂತರ ಅಭ್ಯಾಸವಾಯಿತು. ಈಗ ಅದು ಪ್ರಾರ್ಥನೆಯಾಗಿದೆ. ನಿನಗೆ ಉತ್ತರ ಕೊಡಬೇಕೆಂಬ ಒತ್ತಾಯ ಇಲ್ಲ. ನನಗೆ ಕೇಳಬೇಕೆಂಬ ಹಠವೂ ಇಲ್ಲ. ಆದರೂ ಮನಸ್ಸು ಕೇಳುತ್ತದೆ. ಯಾಕೆಂದರೆ "ಆರಾಮ?" ಎನ್ನುವುದು ನಿನ್ನ ಕ್ಷೇಮ ವಿಚಾರಿಸುವ ಪದವಲ್ಲ ಕ್ಷಮಿಸು ಅದು ನನ್ನ ಆಲೋಚನೆಗೆ ನಾನು ಕೊಡುವ ಸಣ್ಣ ವಿರಾಮ.

ವಿಚಿತ್ರ ಅಲ್ಲವಾ? ನೀನು ಆರಾಮದಲ್ಲಿರಲಿ, ವಿರಾಮದಲ್ಲಿರಲಿ, ಗೊಂದಲದಲ್ಲಿರಲಿ, ಗೆಲುವಿನಲ್ಲಿರಲಿ, ಸೋಲಿನಲ್ಲಿರಲಿ ನನ್ನ ಮನಸ್ಸಿನ ಮೊದಲ ಬೇಡಿಕೆ ಒಂದೇ: "ನೀನು ಚೆಂದದಲ್ಲಿದ್ದೀಯ" ಉಳಿದದ್ದೆಲ್ಲ ಅದರ ನಂತರ. ಬಹುಶಃ ಅಕ್ಕರೆ ಅಂದ್ರೆ ಇದೇ ಇರಬೇಕು?. ಅದು ಹಕ್ಕು ಕೇಳುವುದಿಲ್ಲ ಸುಂಕ ಕಟ್ಟಿಸಿ ಕೊಳ್ಳುವುದಿಲ್ಲ. ಕಾರಣ ಕೇಳುವುದಿಲ್ಲ ಹೇಳುವುದೂ ಇಲ್ಲ. ಸಂಬಂಧಕ್ಕೆ ಹೆಸರು ಹುಡುಕುವುದಿಲ್ಲ. ಸುಮ್ಮನೆ ಒಬ್ಬರ ಕ್ಷೇಮದಲ್ಲಿ ತನ್ನ ನೆಮ್ಮದಿಯನ್ನು ಇಟ್ಟುಬಿಡುತ್ತದೆ ಇಲ್ಲ ಕಟ್ಟಿಕೊಂಡು ಬಿಡುತ್ತದೆ?.

ನನ್ನ ದಿನದ ಲೆಕ್ಕಾಚಾರವೂ ವಿಚಿತ್ರ. "ನಾನು ಹೇಗಿದ್ದೇನೆ?" ಎನ್ನುವ ಪ್ರಶ್ನೆಯಿಂದ ಅದು ಶುರುವಾಗುವುದಿಲ್ಲ. "ನೀನು ಹೇಗಿದ್ದೀಯ?" ಎನ್ನುವ ಪ್ರಶ್ನೆಯಿಂದಲೇ ಶುರುವಾಗುತ್ತದೆ. ನೀನು "ಚೆನ್ನಾಗಿದ್ದೇನೆ" ಅಂದರೆ, ನನ್ನೊಳಗೆ ಇಡೀ ದಿನ ನಡೆದಿದ್ದ ಪ್ರಹಸನಕ್ಕೆ ತೆರೆ ಬೀಳುತ್ತದೆ.

ನೀನು ಸ್ವಲ್ಪ ಸುಸ್ತಿನ ಧ್ವನಿಯಲ್ಲಿ ಮಾತಾಡಿದರೆ, ನನ್ನೊಳಗೆ ಸಾವಿರ ಕಥೆಗಳು ಹುಟ್ಟುತ್ತವೆ. ನಿನ್ನ ಪಿಸುಮಾತು ನಿನಗೆ ಪಿಸುಮಾತೇ ಇರಬಹುದು; ನನಗೆ ಅದು ಸಮುದ್ರದ ಅಲೆ. ಹೊರಗಿನಿಂದ ಯಾರಿಗೂ ಕೇಳಿಸದ ಆ ಸಣ್ಣ ದನಿ, ನನ್ನೊಳಗಿನ ತೀರದ ಯಾಮವನ್ನೇ ಬದಲಾಯಿಸುತ್ತದೆ.

ನನಗೆ ಆಗಾಗ ನನ್ನ ಮೇಲೆಯೇ ನಗು ಬರುತ್ತದೆ. "ಏಕೆ ಇಷ್ಟು ಯೋಚಿಸುತ್ತೀಯ?" ನನ್ನನ್ನೇ ನಾನು ಕೇಳಿಕೊಳ್ಳುತ್ತೇನೆ, ಉತ್ತರ ಮಾತ್ರ ಯಾವತ್ತೂ ಒಂದೇ. ಕೆಲವು ಮನುಷ್ಯರು ನಮ್ಮ ಬದುಕಿಗೆ ಬರುವುದಿಲ್ಲ; ನಮ್ಮ ಬದುಕಿನೊಳಗೆ ಬಂದು ನೆಲೆಸಿಬಿಡುತ್ತಾರೆ. ಅವರು ಜಾಗ ಕೇಳುವುದಿಲ್ಲ. ನಾವು ಕೊಡೋದೂ ಇಲ್ಲ. ಆದರೂ ಮನಸ್ಸು ಅವರ ಹೆಸರಿನಲ್ಲಿ ಒಂದು ಮೂಲೆ ಕಟ್ಟಿಬಿಡುತ್ತದೆ. ಆ ಮೂಲೆಯಲ್ಲಿ ಅಕ್ಕರೆ ಇರುತ್ತದೆ, ಭಯ ಇರುತ್ತದೆ, ಭರವಸೆ ಇರುತ್ತದೆ, ಹೇಳದ ಸಾವಿರ ಪ್ರಾರ್ಥನೆಗಳೂ ಇರುತ್ತವೆ.

ಕೆಲವೊಮ್ಮೆ ಅನಿಸುತ್ತದೆ... ಮನಸ್ಸು ಒಂದು ಬ್ಯಾಂಕ್ ಆಗಿದ್ದರೆ, ಅದರ ದೊಡ್ಡ ಠೇವಣಿ ನಿನ್ನ ಕ್ಷೇಮ. ದೊಡ್ಡ ಸಾಲ ನಿನ್ನ ಚಿಂತೆ. ಅದಕ್ಕೆ ಸೇರುವ ಬಡ್ಡಿ ನನ್ನ ಮೌನ. ಎಷ್ಟೇ ಲೆಕ್ಕ ಹಾಕಿದರೂ ಈ ಖಾತೆ ಮುಚ್ಚುವುದಿಲ್ಲ. ಏಕೆಂದರೆ ಅಕ್ಕರೆಗೆ ಗಣಿತ ಗೊತ್ತಿಲ್ಲ. ಅದು ಸೇರಿಸುವುದಷ್ಟೇ ಬಲ್ಲದು; ಕಳೆಯುವುದನ್ನು ಕಲಿತಿಲ್ಲ. ಅದು ದೂರ ಅಳೆಯುವುದಿಲ್ಲ; ಧ್ವನಿ ಅಳೆಯುತ್ತದೆ. ಸಮಯ ನೋಡುವುದಿಲ್ಲ ಸ್ಪಂದನೆ ನೋಡುತ್ತದೆ, ಅಂತ್ಯಕು ಅನಂತಕು ದಾರಿ ತೋರುತ್ತದೆ ಹಿಡಿದರೆ ಒಲವಾಗಿ ಬಿಟ್ಟರೆ ಬಲವಾಗಿ ಚಿಮ್ಮತ್ತದೆ.

ನಿನ್ನ ಬದುಕಿನಲ್ಲಿ ನನಗೆ ಎಷ್ಟು ಜಾಗವಿದೆ ಎಂಬುದು ನನಗೆ ಗೊತ್ತಿಲ್ಲ. ಇರಬಹುದು. ಇರದಿರಬಹುದು. ಆದರೆ ನನ್ನ ಮನಸ್ಸಿನಲ್ಲಿ ನಿನ್ನ ಕ್ಷೇಮಕ್ಕೆ ಮೀಸಲಾದ ಒಂದು ಜಾಗ ಇದೆ. ಅದು ಯಾರ ಹೆಸರಿಗೂ ಬಾಡಿಗೆಗೆ ಹೋಗುವುದಿಲ್ಲ. ಅಲ್ಲಿ ಪ್ರತಿದಿನ ಒಂದೇ ಪ್ರಶ್ನೆ ಬಂದು ಕುಳಿತುಕೊಳ್ಳುತ್ತದೆ.

"ಆರಾಮ?"

ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಸಂತೋಷ. ಸಿಗದಿದ್ದರೂ ಬೇಸರವಿಲ್ಲ. ಯಾಕೆಂದರೆ ಕೆಲವು ಪ್ರಶ್ನೆಗಳು ಉತ್ತರಕ್ಕಾಗಿ ಹುಟ್ಟುವುದಿಲ್ಲ. ಒಬ್ಬರು ಚೆನ್ನಾಗಿರಲಿ ಎಂದು ಮನಸ್ಸು ಪ್ರತಿದಿನ ಹಚ್ಚುವ ಅಕ್ಕರೆಯ ಬೆಳಗಾಗಿ ಪ್ರಜ್ವಲಿಸುತ್ತದೆ.

— ಸು:ಮೇರು


메타데이터
post_id
c6d8abce6e82
slug
ಮತ್ತೆ-ಆರಾಮ-c6d8abce6e82
url
https://medium.com/@suvyakta/%E0%B2%AE%E0%B2%A4%E0%B3%8D%E0%B2%A4%E0%B3%86-%E0%B2%86%E0%B2%B0%E0%B2%BE%E0%B2%AE-c6d8abce6e82
canonical_url
https://medium.com/@suvyakta/%E0%B2%AE%E0%B2%A4%E0%B3%8D%E0%B2%A4%E0%B3%86-%E0%B2%86%E0%B2%B0%E0%B2%BE%E0%B2%AE-c6d8abce6e82
author_url
https://medium.com/@suvyakta
status
ok
fetched_at
2026-08-17 13:15:29