ಬದುಕೊಂದು ಬಾಳೆಎಲೆ
ದಯವಿಟ್ಟು ಭಾರ ಹಾಕ್ಬೇಡಿ..
ಬದುಕೊಂದು ಬಾಳೆಎಲೆ
ದಯವಿಟ್ಟು ಭಾರ ಹಾಕ್ಬೇಡಿ..
ಇಷ್ಟೊಂದು ಜನದೊಳಗೆ ಎಲ್ಲಾದರೂ 2 ಚೇರ್ ಸಿಕ್ರೆ ಸಾಕು, ಊಟ ಮಾಡಿ ಹೋಗ್ಬೇಕು ಅನ್ಕೊಂಡು ಜಾಗ ಹುಡುಕುತಿದ್ದ ರಘುನ ಸ್ವಲ್ಪ ದೂರದಿಂದ ಕರೆಯುವ ಭದ್ರಣ್ಣ. "ರಘು, ಹೋಯ್ ರಘು, ಇಲ್ಲಿ ಇಲ್ಲಿ" ಈ ಮಾತುಗಳನ್ನ ಕೇಳಿಸಿಕೊಂಡ ರಘು ಅವರೆಡೆಗೆ ತಿರುಗಿ " ಅಣ್ಣ, 2 ಸೀಟ್ ಕಾಲಿ ಇದ್ಯ?" ಎಂದು ಖಾತ್ರಿ ಮಾಡಿಕೊಂಡು ಅವನ ಅಮ್ಮ ರತ್ನಕ್ಕನ ಕರ್ಕೊಂಡು ಭದ್ರಣ್ಣನ ಜೊತೆ ಊಟಕ್ಕೆ ಕೂರುತ್ತಾನೆ. ಆಗ ಭದ್ರಣ್ಣ "ರಘಪ್ಪ, ಯಾವಾಗ ಬಂದೆ ಊರಿಗೆ?" ಎಂದಾಗ ರಘು "ಸಂಜೆ ಬಂದೆ ಅಣ್ಣ, ಆರಾಮಾಗಿ ಮಲ್ಗಣ ಅನ್ಕೊಂಡ್ರೆ ನಮ್ಮಮ್ಮ ಮದುವೆ ಇದೆ ಬಾ ಅಂತ ಕರ್ಕೊಂಡು ಬಂತು." ಎಂದು ಹೇಳುವಾಗಲೇ ಊಟ ಬಡಿಸಲು ಶುರುಮಾಡುತ್ತಾರೆ. ಪೂರಿ ಸಾಗು ಮುಗಿದು, ಘೀರೈಸ್ ಕುರ್ಮನೂ ಮುಗಿದು ಇನ್ನೇನು ಅನ್ನ ಸಾಂಬಾರ್ ಬರೋ ಟೈಮಿಗೆ ರಘುವಿನ ಊಟದ ಎಲೆ ನೋಡಿ ಭದ್ರಣ್ಣ "ಏನ್ ರಘಪ್ಪ ಎಲೆ ಮೇಲೆ ಹಂಗೆ ಊಟ ಬಿಟ್ಟಿದೀಯ? ಅದ್ಕೇನಾದ್ರೂ ಜೀವ ಇದ್ದಿದ್ರೆ ಏನ್ ಹೇಳ್ತಿತ್ತು ಹೇಳು?, ಏನಯ್ಯ ನನ್ನ ಮೇಲೆ ಹಿಂಗೆ ಭಾರ ಬಿಟ್ಟು ಹೋಗ್ತಿಯಲ್ಲ, ನಿನ್ನ ಹೊಟ್ಟೆ ತುಂಬಿಸಿದಕ್ಕೆ ಒಂದು ಚೂರು ಬೆಲೆ ಇಲ್ದಂಗೆ. ನಿಮ್ಮ ಮನೇಲಿ ಇದೆನ್ನೇನಾ ಹೇಳ್ಕೊಟ್ಟಿರೋದು ಅಂತಾ ಬೈತಿತ್ತು ಅಲ್ವಾ? ನಮ್ಗೆ ಇಷ್ಟ ಆಗ್ತಿಲ್ಲ ಅಂತ ಬೇರೆಯವರ ಮೇಲೆ ಭಾರ ಹಾಕೋಕೆ ಆಗತ್ತಾ ಹೇಳು? ಏನ್ ಹುಡುಗ್ರೋ, ಹೋಗ್ಲಿ ಊಟ ಮಾಡು." ಎಂದು ಹೇಳಿ.

ಎಲ್ಲರು ಊಟ ಮಾಡಿ ಊಟದ ಹಾಲ್ನಿಂದ ಆಚೆ ಬಂದು icecream ತಿನ್ನುವಾಗ ರತ್ನಕ್ಕ, "ಭದ್ರ ಯಾವುದರಲ್ಲಿ ಬಂದಿದ್ದೀಯಾ?" ಎಂದದ್ದಕ್ಕೆ "ಅದೇ ಅಕ್ಕ ಬಸ್ಸು ಮಾಡಿದ್ರಲ್ಲ ಅದ್ರಲ್ಲಿ." ಆಗ ರತ್ನಕ್ಕ "ಹೌದಾ ಹಂಗಿದ್ರೆ ಹೋಗ್ಬೇಕಿದ್ರೆ ನಮ್ ಜೊತೇನೆ ಬಾ, ನಾವು ಕಾರಲ್ಲಿ ಇಬ್ಬರೇ ಬಂದಿದ್ದೀವಿ. ಒಟ್ಟಿಗೇ ಹೋಗಣ" ಇದಕ್ಕೆ ಭದ್ರಣ್ಣ, "ಹೋ ಹಂಗ, ಸರಿ ಹಂಗಾರೆ ನಿಮ್ಮ ಜೊತೇನೆ ಬರ್ತೀನಿ, ನಡೀರಿ." ಎಂದು ಅವರೆಲ್ಲರು ಅಲ್ಲಿಂದ ಹೊರಟು ಬರಬೇಕಿದ್ರೆ ಕಾರಿನಲ್ಲಿ ಭದ್ರಣ್ಣ "ರಘಪ್ಪ ಭಾನುವಾರ ಹೋಗುತ್ತೆ ಅಲ್ವಾ ಬೆಂಗಳೂರಿಗೆ?" ಎಂದಾಗ ರತ್ನಕ್ಕ "ಇಲ್ಲ, ಇಲ್ಲೇ ಮನೆಯಿಂದನೇ ಕೆಲ್ಸ ಮಾಡ್ತಾನಂತೆ. ಇನ್ನು 1.5 ತಿಂಗಳು ಇಲ್ಲೇ ಇರ್ತಾನೆ." ಎನ್ನುವಾಗಲೇ ಮಾತನಾಡುವ ರಘು " ಭದ್ರಣ್ಣ, ನಾಳಿಕಿಲ್ಲ ನಾಡಿದ್ದು ಮೀನು ಹಿಡಿಯೋಕೆ ಹೋಗಣ?" ಆಗ ಭದ್ರಣ್ಣ, "ಆಯ್ತು ಹೋಗಣ, ನಾಳೇನೇ ಮೀನಿನ ಬಲೆ, ಗಾಳ ಎಲ್ಲಾ ಹೊಂಚ್ಕೋತೀನಿ." ಎಂದ ತಕ್ಷಣ ರತ್ನಕ್ಕ "ಹೇ ರಘು! ನಿನ್ಗೆ ಊರಿಗೆ ಬಂದಾಗೆಲ್ಲ ಅವ್ನಿಗೆ ಕಾಟ ಕೊಡದೆ ಇರೋಕೆ ಆಗಲ್ಲ ಅಲ್ವ?" ಅದೇನ್ ಹುಡ್ಗನೋ, ಹಾ ಭದ್ರ, ನಿಮ್ಮಮ್ಮ ಇನ್ನೂ ಹಂಗೆ ಇದ್ಯ ಏನು, ಇಲ್ಲ ಈಗೇನಾದರೂ ಎದ್ದು ಓಡಾಡುತ್ತಾ?" ಇದಕ್ಕೆ ಭದ್ರಾ "ಹೇ ಇಲ್ಲ ಕಣಕ್ಕ ಹೀಗ್ಲು ಹಂಗೇನೇ, ಅದ್ರಲ್ಲೂ ಒಂದ್ 2ವಾರದಿಂದ ಮಾತು ಕಡ್ಮೆ ಆಗಿದೆ. ನಾನು ಮದ್ವೆಗೆ ಬರೋಕೆ ಮುಂಚೆ ಗಂಜಿ ಕುಡಿಸಿ, ಅದೇ ನಮ್ ಹಿಂದ್ಲು ಮನೆ ನಂಜಿಗೆ ನೋಡ್ಕೊಳೋಕೆ ಹೇಳಿ, ನಾನು ಇಲ್ಲಿಗೆ ಬಂದಿದ್ದೆ. ಈಗ ಹೋಗಿ ಮಾತಾಡ್ಸಿ, ಏನಾದ್ರು ತಿಂತೀನಿ ಅಂದ್ರೆ ಕೊಟ್ಟು ಮಲಗಿಸಬೇಕು." ಹೀಗೆ ಅವರ ಮಾತುಗಳು ಮುಂದುವರೆದು ಭದ್ರಣ್ಣನ ಮನೆ ಬಳಿ ಬಂದಾಗ ನಂಜಿ ಮನೆಯ ಮುಂಭಾಗದಲ್ಲೇ ಅತ್ತಿಂದಿತ್ತ ಓಡಾಡುತ್ತಿರುವುದನ್ನು ಕಂಡು ಅವಳೆಡೆಗೆ ಬರುವ ಭದ್ರನ ನೋಡಿದ ನಂಜಿ "ಭದ್ರ ಬಂದೇನಪ್ಪ, ನಿಮ್ಮವ್ವ ಆಲೆ ಒಂದ್ ಅರ್ಧ ಗಂಟೆಯಿಂದ, ಕಣ್ಣುಗಳ್ನ ತೀಳ್ಗಣ್ಣು ಮಾಡ್ಕೊಂಡು ಕೋರ್ಗೊದು ಜಾಸ್ತಿಯಾಗಿದೆ. ನನಗೇನೋ ಉಳಿಯಂಗೆ ಕಾಣಲ್ಲ ನಡಿ ನೋಡು. ಬಾಯಿಗೆ ಒಂದು ತೊಟ್ಟು ಹಾಲು ನೀರು ಏನಾದ್ರು ಬಿಡು." ಈ ಮಾತುಗಳಿಗೆ ಭದ್ರ "ಹೌದಾ, ಥೋ ನಾನು ಹಾಳಾದೋನು ಇವತ್ತೇ ಆಚೆ ಹೋದೆ ನೋಡು." ಎಂದು ಹೇಳಿ ಮನೆಯೊಳಗೆ ಬಂದು ಅವನ ತಾಯಿ ಬಳಿ ಹೋಗಿ "ಅವ್ವ, ಯವ್ವ ಇಲ್ನೋಡು ನಾನು ಭದ್ರ ಬಂದಿದೀನಿ." ಎಂದು ಅವಳನ್ನ ತನ್ನ ತೋಳುಗಳಿಂದ ಎತ್ತಿ ನಂಜಮ್ಮ ಕಡೆ ತಿರುಗಿದರೆ, ಅವಳೂ ಆಗಲೇ ಒಂದು ಲೋಟದಲ್ಲಿ ಹಾಲನ್ನು ಹಿಡಿದು ನಿಂತಿರುತ್ತಾಳೆ. ಇವನು ನೋಡುತ್ತಿದ್ದಂತೆ ಅವನ ಕೈಗೇ ಲೋಟವನ್ನು ಕೊಡುತ್ತಾಳೆ. ಹಾಲನ್ನು ಇಸಿದುಕೊಂಡ ಭದ್ರ, ಅವನ ಅವ್ವನ ಬಾಯಿಗೆ ಒಂದು ಚಮಚದಷ್ಟುನ್ನು ಬಿಡುತ್ತಾನೆ. ಬಾಯಿಗೆ ಬಿಟ್ಟ ಹಾಲನ್ನು ಒಂದು ಬಾರಿ ಗುಟುಕುಸಿ (ನುಂಗುವ ಪ್ರಯತ್ನ) ನಂತರ ಎರಡನೇ ಬಾರಿ ಗುಟುಕಿಸುವಷ್ಟರಲ್ಲಿ ಉಸಿರೇ ನಿಲ್ಲಿಸುತ್ತಾಳೆ. ಇದನ್ನು ಗಮನಿಸಿದ ಭದ್ರ, ನಂಜಮ್ಮನ ಮುಖ ನೋಡಿದಾಗ ಅವಳು "ಇನ್ನಿಲ್ಲ." ಎನ್ನುವ ಸನ್ನೆ ಮಾಡುತ್ತಾಳೆ. ಇದನೆಲ್ಲ ಅಲ್ಲೇ ಇದ್ದು ಗಮನಿಸುವ ರಘುವಿಗೆ ಆಶ್ಚರ್ಯವೆನಿಸುವುದು, ತನ್ನ ತಾಯಿ ಸತ್ತರು ಅಳದ ಭದ್ರಣ್ಣನ ನಡುವಳಿಕೆ.
ಇದೆಲ್ಲಾ ಆಗಿ ಒಂದು ತಿಂಗಳ ನಂತರ, ರಘುವಿಗೆ ಮಾತು ಕೊಟ್ಟಂತೆ ಅವನನ್ನು ಮೀನು ಹಿಡಿಯಲು ಕರೆದುಕೊಂಡು ಹೋಗುತ್ತಾನೆ ಭದ್ರ. ಮೀನಿಗೆ ಬಲೆ ಮತ್ತೆ ಗಾಳ ಹಾಕಿ ಅವರಿಬ್ಬರು ಕೆರೆಯ ದಂಡೆಯ ಮೇಲೆ ಕೂತಿರುವಾಗ ರಘು ಭದ್ರನ ಕಡೆ ತಿರುಗಿ, "ಭದ್ರಣ್ಣ ಒಂದ್ ಮಾತು ಕೇಳ್ಲ?" ಅದಕ್ಕೆ ಭದ್ರ "ಅದೇನ್ ಕೇಳು ರಘಪ್ಪ." "ಭದ್ರಣ್ಣ ನೀನ್ಯಾಕೆ ಮದುವೆ ಆಗ್ಲಿಲ್ಲ?" ಈ ಮಾತಿಗೆ ಭದ್ರ "ಹೇ! ಒಂದ್ 10-12 ವರ್ಷದ ಹಿಂದೆ ಮದುವೆಗೆ ಎಲ್ಲಾ ತಯಾರಿ ಆಗಿತ್ತು, ಆಮೇಲೆ ನಮ್ಮ ಮನೆದೇವರು ಪ್ರಸಾದ ಕೊಡ್ಲಿಲ್ಲ ಅಂತ ಮದುವೆ ನಿಂತೋತು. ಹಿಂಗೆ ಒಂದ್ 2–3 ಸಾರಿ ಆದ್ಮೇಲೆ, ನಾನೇ ಒಂದು ತೀರ್ಮಾನಕ್ಕೆ ಬಂದೆ. ನಮ್ಮ ತಾತ ಮಾಡಿದ್ದ ಕರ್ಮನ ನಮ್ಮಪ್ಪ ತೀರ್ಸ್ದಲೇ ಕುಡ್ದು ಕುಡ್ದು ಇನ್ನೂ ಕರ್ಮ ಮಾಡಿ, ನಮ್ಮವ್ವನ್ನು ನನ್ನು ಅವರಿವರ ಮನೆ ಜೀತ ಮಾಡೋಂಗೆ ಮಾಡ್ದ. ಇದೆಲ್ಲಾ ನೋಡಿದ್ಮೇಲೆ ನನಗನ್ನಿಸಿದ್ದೇನೆಂದರೆ ನಾನು ಮಾಡೋ ಕರ್ಮನೆಲ್ಲ ನನ್ನ ಮಗ ಹುಟ್ಟು ತೀರಿಸೋದ್ಕಿಂತ, ನಾನೇ ಆಗೋವಷ್ಟು ತೀರ್ಸಿ ಸಾಯೋದು ಮೇಲು ಅಂತ ಸುಮ್ನಾಗಿ ಬಿಟ್ಟೆ. ಇದ್ನೋಡು ನನ್ನ ಮದ್ವೆ ಕಥೆ." ಎಂದಾಗಲೇ ರಘು ಅಂದುಕೊಳ್ಳುತ್ತಾನೆ, ನಾನು ಆ ಪ್ರಶ್ನೆನ ಇವತ್ತು ಕೇಳಿಲ್ಲ ಅಂದ್ರೆ ಮತ್ತೆ ಕೇಳೋದು ಕಷ್ಟ ಅನ್ಕೊಂಡು "ಅಣ್ಣ ನೀನು ಬೇಜಾರು ಮಾಡ್ಕೊಳಲ್ಲ ಅಂದ್ರೆ ಇನ್ನೊಂದು ಮಾತು, ಅವತ್ತು ನಿಮ್ಮವ್ವ ಸತ್ತಿದ್ದಿಸ ನೀನ್ಯಾಕೆ ಅಳಲಿಲ್ಲ?" ಈ ಮಾತಿಗೆ ಒಂದು ಕ್ಷಣವು ಯೋಚಿಸದೆ ಭದ್ರಣ್ಣ "ಈಗ ನೋಡು ನಾವು ಮನುಷ್ರು ಜೀವನದಲ್ಲಿ ತುಂಬಸಾರಿ ಸಾಯ್ತೀವಿ, ಉಸಿರು ಹೋದಾಗ ಎಲ್ಲರಿಗೂ ಗೊತ್ತಾಗುತ್ತೆ ಅಷ್ಟೇ. ಹಂಗೆ ನಮ್ಮವ್ವನುವೇ ಈ ಕಡೆ ಕುಡ್ಕ ಗಂಡ, ಆಕಡೆ ಮದ್ವೆ ಮಾಡ್ಕೊಟ್ಟು ಪಿಂಡ ಬಿಟ್ಟೋರ ತರ ತಿರುಗು ನೋಡ್ದೆ ಇರೋ ತವರಿನವರು ಇವರುಗಳ ಮಧ್ಯೆ ನಮ್ಮವ್ವ ಎಷ್ಟು ಸಾರಿ ಸತ್ತು ಬದುಕುರ್ಬೇಕು, ಹಂಗೆ ಬದುಕೋಕೆ ಎಷ್ಟು ಧೈರ್ಯ ಇರ್ಬೇಕು. ಇನ್ತೋಳ ಮಗ ನಾನು ಅವ್ಳು ಸತ್ಲು ಅಂತ ಅವಳ ಮುಂದೆ ಅತ್ರೆ ಅವ್ಳಿಗೆ ಅವ್ಮಾನ ಮಾಡ್ದಂಗೆ ಅಲ್ವ, ಅದುಕ್ಕೆ ಅವ್ಳನ್ನ ಮಣ್ಣಿಗೆ ಹಾಕಿ ಬರೋವರ್ಗು ಅಳಬಾರದು ಅಂತ ಸುಮ್ನಿದ್ದು, ಮನೆಗೆ ಬಂದು ಎರಡು ದಿನ ಅಳ್ಕೊಂಡು ಕೂತಿದ್ದೆ. ಆಗ ನಿಮ್ಮಪ್ಪನೇ ಬಂದು ಬೈದು ಸಮಾಧಾನ ಮಾಡಿ ಸುಮ್ಮನಿರಿಸಿದ್ದು. ಅದುಕ್ಕಿನ ಮೇಲಾಗಿ ನಮ್ಮವ ಯಾವಾಗ್ಲೂ ಹೇಳೋಳು, "ಮಗಾ ಬದುಕು ಬಾಳೆ ಎಲೆ ಇದ್ದಂಗೆ, ದೇವ್ರು ಇಟ್ಟಿದ್ದ ಕಷ್ಟಸುಖನೆಲ್ಲಾ ತಿಂದು ಕಾಲಿ ಮಾಡ್ಬೇಕು. ಅದ್ಬಿಟ್ಟು ತಿನ್ನೋಕೆ ಆಗಲ್ಲ ಅಂತ ಸುಮ್ನಿದ್ರೆ ಭಾರಕ್ಕೆ ಬಾಳೆ ಎಲೆ ಹರದೋದಂಗೆ ಬದುಕು ಆಗುತ್ತೆ ಅಂತ." ಅದುಕ್ಕೆ ಜಾಸ್ತಿ ತಲೆ ಕೆಡಿಸಿಕೊಳ್ದೆ ಬಂದಿದ್ದನ್ನ ತಿನ್ಕೊಂಡು ಮುಂದಕ್ಕೆ ಹೋಗ್ತಾ ಇರೋದು.

ಎನ್ನುವಾಗಲೇ ಗಾಳಕ್ಕೆ ಮೀನು ಬಿದ್ದುದನ್ನು ಗಮನಿಸಿ ಅವರಿಬ್ಬರ ಗಮನ ಮಾತುಕತೆಯಿಂದ ಅಲ್ಲಿಗೆ ಜಾರುತ್ತದೆ.
ಈ ಕಥೆನ ಬರೀತಾ ನಂಗೆ ಯಾರೊ ದೊಡ್ಡೋರು ಹೇಳಿದ್ದ ಮಾತು ನೆನಪಾಯ್ತು, ಅದೇನೆಂದರೆ:
ಇರುವ ಬಾಳು ಮೂರುದಿನ,
ಮೆರೆದು ಬಾಳುವುದಕ್ಕಿಂತ, ಮರೆತು ಬಾಳು..
ಯಾವ್ದುನೆಲ್ಲ ಮರೆಯಬೇಕು ಅನ್ನೊದು ನಮ್ಗೆ ಗೊತ್ತಿರಬೇಕಷ್ಟೇ, ಅಲ್ವಾ..?
— ಕಣ್ಚಂದ್ರ
메타데이터
- post_id
- e522b3890d13
- slug
- ಬದುಕೊಂದು-ಬಾಳೆಎಲೆ-e522b3890d13
- url
- https://medium.com/@suvyakta/%E0%B2%AC%E0%B2%A6%E0%B3%81%E0%B2%95%E0%B3%8A%E0%B2%82%E0%B2%A6%E0%B3%81-%E0%B2%AC%E0%B2%BE%E0%B2%B3%E0%B3%86%E0%B2%8E%E0%B2%B2%E0%B3%86-e522b3890d13
- canonical_url
- https://medium.com/@suvyakta/%E0%B2%AC%E0%B2%A6%E0%B3%81%E0%B2%95%E0%B3%8A%E0%B2%82%E0%B2%A6%E0%B3%81-%E0%B2%AC%E0%B2%BE%E0%B2%B3%E0%B3%86%E0%B2%8E%E0%B2%B2%E0%B3%86-e522b3890d13
- author_url
- https://medium.com/@suvyakta
- status
- ok
- fetched_at
- 2026-07-10 03:40:03